ಸೊಳ್ಳೆ ಬೇಟೆ
ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ.
ಪ್ರಯೋಗ ಒಂದು
ನಾನು ಮಲಗೋ ಜಾಗದಿಂದ ಸಲ್ಪ ದೂರ ನಿಲ್ಲೋದು, ಸೊಳ್ಳೆ ನಾನು ಮಲ್ಗಿರೊ ಜಾಗಕ್ಕೆ ಹೊಗಿ ಹುಡುಕುತ್ತೆ ಅವಾಗ ಟಪ್ ಅಂತ ಹಿಡಿದು ಬಿಡೊದು ಅಂತ ಪ್ಲಾನ್ ಮಾಡಿದೆ. ಸೊಳ್ಳೆ ಬಂದ ತಕ್ಷಣ ಹೊಡೆಯಕ್ಕೆ ಎಲ್ಲಾ ತಯಾರಿ ಮಾಡಿಕೊಂಡು ನಿಂತೆ, ಸಲ್ಪ ಹೊತ್ತಿಗೆ ಕಾಲಿಗೆ ಏನೋ ಕಚ್ಚಿದಂಗಾಯ್ತು !. ಅದಕ್ಕೆ ನನ್ನ ಪ್ಲಾನ್ ಎಲ್ಲಾ ಹೆಂಗೋ ಗೊತ್ತಾಗಿ ಬಿಟ್ಟಿತ್ತು ಹಂಗಾಗಿ ಹಿಂದಿನಿಂದ ಅಟ್ಯಾಕ್ ಮಾಡಿತ್ತು. ಈ ಪ್ಲಾನ್ ಯಾಕೋ ಸರಿಯಿಲ್ಲ ಅಂತ ಬೇರೆ ಯೋಚ್ನೆ ಮಾಡಕ್ಕೆ ಶುರು ಮಾಡಿದೆ.
ಪ್ರಯೋಗ ಎರಡು
ಪೂರ್ತಿ ಹೊದಿಕೆ ಹೊದ್ದು ನಿದ್ರೆ ಬಂದಂತೆ ನಟಿಸೋದು, ಎಡಕೈ ಸಲ್ಪ ಹೊರಗೆ ಇಟ್ಟು ಕೊಳ್ಳೋದು ಬಲಗೈ ನ ಸೊಳ್ಳೆ ಹೊಡೆಯಕ್ಕೆ ರೆಡಿಯಾಗಿ ಇಟ್ಕೋಳದು ಅಂತ ಯೋಚಿಸಿ ಅದರಂತೆ ಎಲ್ಲಾ ವ್ಯವಸ್ತೆ ಮಾಡಿದೆ. ನನ್ನ ಪ್ಲಾನ್ ಬಗ್ಗೆ ನಂಗೇ ಹೆಮ್ಮೆ ಅನ್ನಿಸ್ತಿತ್ತು. ನಾನು ನನ್ನ ಎಡ ಕೈ ನ ನೋಡ್ತಾ ಹೊಂಚು ಹಾಕ್ತಿದ್ದೆ, ಸೊಳ್ಳೆ ನನ್ನ ಹತ್ತಿರ ಬಂದ ಅನುಭವ ಆಗುತ್ತಿತ್ತು. ಇದ್ದಕ್ಕಿದ್ದಂತೆ ಸೊಳ್ಳೆ ಯ ಗುಯ್ ನಿಂತಂತಾಯ್ತು ನಾನು ಮತ್ತೂ ಅಲರ್ಟ್ ಆದೆ, ಆದರೆ ಅದು ನನ್ನ ಕೈ ಬಿಟ್ಟು ಮುಖಕ್ಕೆ ಗುರಿ ಇಟ್ಟಿತ್ತು ನಾನು ಹೊಡೆಯಕ್ಕೆ ಕೈ ಎತ್ತೋ ಅಷ್ಟರಲ್ಲಿ ಅದು ಓಡಿ ಹೋಗಿತ್ತು. ಛೆ ತುಂಬಾ ವಿಶ್ವಾಸ ಇದ್ದ ಪ್ರಯೋಗ ಹಿಂಗಾಯ್ತಲ್ಲ ಅಂತ ಬೇಜಾರಾಯ್ತು.
ಪ್ರಯೋಗ ಮೂರು
ಜೋರು ನಿದ್ರೆ ಬರ್ತಿದೆ ಹಾಳಾದ್ದು ಈ ಸೊಳ್ಳೆ ಸಿಕ್ತಿಲ್ವಲ್ಲಾ ಅಂತ ಬೈಕೋತಾ ಇದ್ದೆ ಅಷ್ಟರಲ್ಲಿ ಮತ್ತೊಂದು ಯೋಚ್ನೆ ಬಂತು! ಹೆಂಗೂ ಒಂದೆ ಸೊಳ್ಳೆ ಇರೋದು ಒಂದ್ಸಲ ರಕ್ತ ಕುಡಿದ್ರೆ ಅದ್ರ ಹೊಟ್ಟೆ ತುಂಬೋಗತ್ತೆ, ಅದಕ್ಕೆ ಒಂದ್ಸಲ ಹೆಂಗಾರ ಸಹಿಸ್ಕೋಂಬಿಡದು ಅಂತ ಅಂದ್ಕೊಂಡು ಲೈಟ್ ಆಫ್ ಮಾಡಿ ಮಲಗಿದೆ. ಸೊಳ್ಳೆ ಬಂದೇ ಬಿಡ್ತು, ನಾನು ಮನಸು ಗಟ್ಟಿ ಮಾಡ್ಕೊಂಡೆ. ಸಲ್ಪ ಹೊತ್ತಿಗೆ ಅದ್ರ ಸದ್ದೂ ನಿಂತೋಯ್ತು, ನನ್ನ ಕೈ ಆಟೋಮ್ಯಾಟಿಕ್ ಆಗಿ ಹೋಗಿ ನನ್ನ ಕೆನ್ನೆಗೆ ಹೊಡೆದಿತ್ತು. ಸೊಳ್ಳೆ ಯ ಸದ್ದು ಶಾಶ್ವತ ವಾಗಿ ನಿಂತಿತ್ತು. ನನ್ಗೆ ನಂಬಕ್ಕೇ ಆಗ್ಲಿಲ್ಲ ಸಲ್ಪ ಹೊತ್ತು! ಕತ್ತಲಲ್ಲೇ ಸೊಳ್ಳೆ ಹೊಡೆದೆ, ಎಂತಾ ಗುರಿ! ಎಷ್ಟು ಹೊಗಳಿದ್ರೂ ಸಾಲದು ಅಂತ ಅಂದುಕೊಂಡು ಮಲಗಿದೆ.
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage