ರಾಯರಿಗೆ ಏನಾಗಿತ್ತು
"ರೀ"
"ಏನೇ?"
"ರಾಯರು ನಿನ್ನೆ ರಾತ್ರಿ ಹೋದರಂತೆ, ಹಾರ್ಟ್ ಅಟ್ಯಾಕ್ ಅಂತೆ"
ಅಯ್ಯೋ ಅಂದುಕೊಳ್ಳುತ್ತಾ ರಾಯರ ಮನೆಗೆ ಹೊರಟೆ. ರಾಯರಿಗೆ 72-73 ವರ್ಷ ಆಗಿದ್ದಿರಬಹುದೇನೋ, ಮೊನ್ನೆ ನನ್ನ ಕ್ಲಿನಿಕ್ ಗೆ ಬಂದಿದ್ದರು ಹುಷಾರಿಲ್ಲ ಅಂತ. ಅವರಿಗೆ ಕೊಟ್ಟ ಎರಡು ತರಹದ ಮಾತ್ರೆಗಳಲ್ಲಿ ಯಾವುದು ಯಾವಾಗ ತಗೋಬೇಕು ಅಂತ ಮಾತ್ರೆ ಹೆಸರು ಹೇಳಿದ್ರೆ ನೆನಪಿಡೋದು ಕಷ್ಟ ಅಂತ "ರಾಯರೆ ಈ ಕೆಂಪು ಬಣ್ಣದ ಮಾತ್ರೆ ದಿನಕ್ಕೆ ಒಂದೇ ತಗೊಳ್ಳಿ , ರಾತ್ರಿ ಊಟ ಆದ್ಮೇಲೆ ತಗೊಂಬಿಡಿ. ಇನ್ನೊಂದು ಬಿಳಿ ಮಾತ್ರೆನ ಮೂರು ಹೊತ್ತು ಊಟ ಆದ್ಮೇಲೆ ತಗೊಳ್ಳಿ. ಒಟ್ಟು ನಾಲ್ಕು ದಿನಕ್ಕೆ ಮಾತ್ರೆಗಳಿವೆ, ಈ ಚೀಟಿಲೂ ಬರೆದಿದೀನಿ ಆಯ್ತಾ " ಅಂತ ಹೇಳಿ ಚೀಟಿನೂ ಬರೆದು ಕೊಟ್ಟಿದ್ದೆ. ಇನ್ನೊಂದು ಸಲ ಹೇಳಕ್ಕೆ ಹೋದಾಗ ನಂಗಷ್ಟೂ ಗೊತ್ತಾಗಲ್ವಾ ಎಷ್ಟು ಸಲ ಹೇಳ್ತೀಯೋ ಅಂತ ಗದರಿದರು. ನಾನು ನಕ್ಕು ಸುಮ್ಮನಾದೆ. ಅವರ ಮನೆಯೆದಿರು ಕಾರಿನಲ್ಲಿ ಬಂದಿಳಿಯುವವರೆಗೂ ಯಾಕೋ ಮನಸಲ್ಲಿ ಇದೇ ಕೊರೆಯುತ್ತಿತ್ತು.
ನೆಂಟರಿಷ್ಟರೆಲ್ಲಾ ಸೇರಿ ರಾಯರ ಅಂತಿಮ ಸಂಸ್ಕಾರ ನೆರವೇರಿಸಿದರು . ಒಳಗಿನ ಕೋಣೆಯಲ್ಲಿದ್ದ ರಾಯರ ಮನೆಯವರಿಗೆ ಸಾಂತ್ವನ ಹೇಳಲು ಒಳಗೆ ಹೋದೆ. ಅಲ್ಲೇ ಟೀಪಾಯಿ ಮೇಲಿದ್ದ ಖಾಲಿಯಾಗಿದ್ದ ಕೆಂಪು ಮಾತ್ರೆಯ ಕವರುಗಳನ್ನೂ ಅದರ ಜೊತೆಗೇ ಇದ್ದ ರಾಯರ ದಪ್ಪ ಕನ್ನಡಕ ನೋಡಿ ಕುಸಿದು ಅಲ್ಲೇ ಕುಳಿತೆ.
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage