ARAVINDA VK

Missed ಕಾಲ್

Sep 23, 2014
1 minute read.
ಕನ್ನಡ ಕಥೆ kannadablog

ಬೆಳಗ್ಗೆ ಎದ್ದೋನು ಪೇಪರ್ ಓದ್ತಾ ಇದ್ದಾಗ 5 messed ಕಾಲ್ಸ್ ಅಂತ ನೋಡ್ಕೊಂಡೆ, ಹೆ ಹೆ messed ಕಾಲ್ಸಾ?.. ಅಂತ ಆಮೇಲೆ ನಗು ಬಂತು. ಈಗಿನ ದಿನಗಳಲ್ಲಿ ನಂಬರ್ ಗಳನ್ನು ನೆನಪಲ್ಲಿ ಇಟ್ಟುಕೊಳ್ಳೋದೇ ಬಹಳ ಕಷ್ಟ, ಈ ಮೊಬೈಲ್ ಗಳಿಂದಾಗಿ ನಂಬರ್ ನೆನಪಿಟ್ಟುಕೊಳ್ಳೋದೇ ಬೇಡ ಅಂತಾಗಿಬಿಟ್ಟಿದೆ. messed ಕಾಲ್ಸ್ ಅಂತ ಮನಸಿಗೆ ಬಂದಿದ್ದು ಸರಿಯಾಗೇ ಇದೆ ಅಂತ ಯೋಚಿಸ್ತಿದ್ದೆ…​

ಅಷ್ಟೊತ್ತಿಗೆ ಗೋಪಿ ಬಂದ, ಅವ್ನು ಬರದೇ ಬಹಳ ದಿನ ಆಗಿತ್ತಪ್ಪ, ಹೋದಸಲ ಬಂದವ ಏನೋ ಸಿಟ್ಟು ಮಾಡಿಕೊಂಡು ಹೋದವ ಕಾಣಿಸ್ಕೊಂಡಿದ್ದೇ ಈಗ.

"ಏನಪ್ಪಾ ಗೋಪಿ? ಏನ್ಸಮಾಚರಾ? ಇಷ್ಟು ಬೆಳಗ್ಗೆ ಬೆಳಗ್ಗೇನೇ ಬಂದ್ ಬಿಟ್ಟಿದೀಯಾ!"

"ಏನಿಲ್ಲ ಕಣೋ ಹಂಗೇ ಆಫೀಸ್ ಕಡೆ ಹೊರಟಿದ್ದೆ, ಒಂದು ಕಾಫಿ ಆಗ್ಲಿ ಅಂತ ಬಂದೆ ಕಣೋ…​"

ಗೋಪಿ ಸುಮ್ನೆ ಬರೋನಲ್ಲ ಅಂತ ಗೊತ್ತು ಆದ್ರೂ ಇರ್ಲಿ, ಹೆಂಗಿದ್ರೂ ಸಲ್ಪ ಹೊತ್ತಿಗೆ ಹೇಳ್ತಾನಲ್ವಾ ಅಂತ ಕಾಫಿ ರೆಡಿ ಮಾಡ್ಕೊಂಡು ಬಂದೆ. ಹಂಗೇ ಕಾಫಿ ಕುಡೀತಾ ಗೋಪಿ ಶುರು ಮಾಡಿದ..

"ಅಲ್ಲ ಕಣೋ.. ಈಗ ಮೊಬೈಲ್ನಲ್ಲಿ ಯಾವ್ದಾದ್ರೂ ಮಿಸ್ ಕಾಲ್ ಇದ್ರೆ ಆ ನಂಬರ್ ಇಂದ ಯಾರು ಕಾಲ್ ಮಾಡಿದ್ದು ಅಂತ ನೋಡಕ್ಕಾಗುತ್ತೇನೋ?"

"ಆಗ್ಬೋದೇನೋ.. ನಂಗಷ್ಟು ಗೊತ್ತಿಲ್ಲ, ಯಾಕೋ ಗೋಪಿ ಏನಾಯ್ತು?"

"ಏನಿಲ್ವೋ ಒಂದು ಮಿಸ್ ಕಾಲ್ ಅಂತ ಮೆಸೇಜ್ ಬಂದಿತ್ತು, ನಂಗ್ಯಾರು ಕಾಲ್ ಮಾಡಿದ್ರು ಅಂತನೇ ಗೊತ್ತಾಗ್ತಿಲ್ವೋ"

"ಹೌದೇನೋ.. ಹಂಗಾದ್ರೆ ಬಿಡಬೇಡ್ವೋ, ಯಾರಾದ್ರೂ ಹುಡುಗಿ ಕಾಲ್ ಮಾಡಿದ್ರೂ ಮಾಡಿರ್ಬೋದೂ, ನೀನೇ ವಾಪಸ್ ಮಾಡಿ ನೋಡ್ಬೇಕಿತ್ತು…​"

"ವಾಪಸ್ ಮಾಡಿ ನೋಡಿದ್ನೋ.. ನಾಟ್ ರೀಚೇಬಲ್ ಅಂತ ಬರ್ತಾ ಇತ್ತು.."

"ನಂಗೂ ಕೊಡೋ ನಂಬರ್, ನಾನೊಂದ್ಸಲ ನೋಡ್ತೀನಿ"

"ಇರ್ಲಿ ಬಿಡೋ ಪರವಾಗಿಲ್ಲ, ನಾನೇ ಮತ್ತೆ ಕಾಲ್ ಮಾಡಿ ನೋಡ್ತೀನಿ"

ಹುಡುಗಿ ಇರ್ಬೋದು ಅಂದಿದ್ದಕ್ಕೆ ನಂಬರ್ರೇ ಕೊಡೋಲ್ವಲ್ಲ ಇವ ಅಂದ್ಕೊಳ್ತಾ ಇದ್ದೆ, ಅಷ್ಟೊತ್ತಿಗೆ ಗೋಪಿ…​

"ಸರಿ ಕಣೋ, ನಾನಿನ್ನು ಹೊರಡ್ತೀನಿ, ಮತ್ತೆ ಸಿಗುವೆ ನಿಂಗೆ" ಅಂತ ಹೊರ್ಟೇ ಹೋದ.

ಎರಡು ದಿನ ಆಯ್ತು, ಗೋಪಿ ವಿಶ್ಯ ನಾನೂ ಮರ್ತು ಬಿಟ್ಟಿದ್ದೆ.. ಮತ್ತೆ ಡಿವಿಜಿ ರೋಡ್ ಅಲ್ಲಿ ಸಿಕ್ಕಿದ, ಕಾಫಿ ಕುಡಿಯೋಣ ಅಂತ ಅಲ್ಲೇ ಒಂದು ಹೋಟೆಲ್ ಗೆ ಹೋದ್ವಿ..

"ಸಿಕ್ಕಿದಳೇನೋ ಆ ಹುಡುಗಿ?"

"ಯಾವ ಹುಡುಗಿನೂ ಇಲ್ಲ, ಹೋಗಪ್ಪಾ ನೀನು.. ಆ ನಂಬರ್ ಯಾವಾಗ್ಲೂ ನಾಟ್ ರೀಚೇಬಲ್ಲೇ ಬರ್ತಿರುತ್ತೆ"

"ಹೌದಾ.. ಈಗ್ಲಾದ್ರೂ ಕೊಡು ಆ ನಂಬರ್ ನಂಗೆ ನಾನೂ ಒಂದ್ಸಲ ನೋಡ್ತೀನಿ.."

"ಸರಿ ತಗೋ ಹಾಗಿದ್ರೆ ಅಂತ ಮೊಬೈಲ್ ತೆಗೆದ.."

"ಏನೋ ಗೋಪಿ ಹೊಸ ಫೋನ್ ತಗೊಂಡಿದೀಯಾ?"

"ಹು ಕಣೊ.. ಹೋದ ವಾರ ತಗೊಂಡೆ ಹೊಸ ಫೋನ್, ಡ್ಯುಯಲ್ ಸಿಮ್ಮು.. ಹೊಸಾ ಸಿಮ್ಮೂ ತಗೊಂಡೆ.."

ಅವ್ನ ಹತ್ರ ನಂಬರ್ ತಗೊಂಡು ಡಯಲ್ ಮಾಡಿದೆ, ಗೋಪಿದೇ ಫೋನ್ ರಿಂಗಾಯ್ತು, ಇಬ್ರೂ ಒಂದ್ಸಲ ಮುಖ ಮುಖ ನೋಡಿಕೊಂಡ್ವಿ.. ಉಳಿದಿದ್ದ ಕಾಫಿಯನ್ನ ಒಂದೇ ಸಮ ಕುಡಿದು, ಏನೂ ಹೇಳದೇ ಹೊರಟೇ ಹೋದ.

About Aravinda VK

Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in