ಮತ್ತೆ ಬಂದ ಗೋಪಿ

ಬಾಗಿಲು ಚಿಲಕ ಹಾಕಿರ್ಲಿಲ್ಲ, ಗೋಪಿ ಹಾಗೇ ಬಾಗಿಲು ತಳ್ಳಿ ತೆಗೆದುಕೊಂಡು ರೂಮ್ ಕಡೆ ಬಂದ. ಇವನು ಟೇಬಲ್ ಮೇಲೆನೇ ಕುಳಿತು ಲ್ಯಾಪ್‍ಟಾಪ್ ಅಲ್ಲಿ ಏನೋ ಮಾಡ್ತಿದ್ದ.

ಗೋಪಿ ಕೇಳಿದ, "ಏನೋ ಟೇಬಲ್ ಮೇಲೇ ಕೂತ್ಕೊಂಡಿದೀಯಾ? ಕುರ್ಚಿ ಏನಾ..ಯ್ತು..?" (ಹಾಗಂತ ಕೇಳೋ ಅಷ್ಟರಲ್ಲೇ ಅಲ್ಲೇ ಕುರ್ಚಿಯ ಮೇಲಿದ್ದ ರಾಶಿ ಬಟ್ಟೆಗಳು ಕಂಡವು)

ಇವನು ಹೇಳಿದ, "ಅದೂ.. ಅದೂ.. ಒಗೆದ ಬಟ್ಟೇ ಎಲ್ಲಾ ಒಣಗಿತ್ತಲ್ಲ, ಅದನ್ನಿನ್ನೂ ಮಡಚಿಡಬೇಕೂ, ಅದೆಲ್ಲಾ ಕುರ್ಚಿ ಮೇಲೆ ಇತ್ತಲ್ಲಾ ಹಾಗಾಗಿ ಟೇಬಲ್ ಮೇಲೇ ಕೂತಿದ್ದೆ.."

"ಅದನ್ನ ಮಡಿಸಿಟ್ಟು ಕೂತ್ಕೋಬಾರ್ದಾ?"

"ಅದೂ.. ಇನ್ನೊಂದು ರೌಂಡ್ ಬಟ್ಟೆ ಒಗೆಯಕ್ಕೆ ಹಾಕಿದೀನಿ, ಅದೂ ಒಣಗಿದ್ಮೇಲೆ ಒಟ್ಟಿಗೆ ಮಡಿಸಿಡೋಣ ಅಂತ.."

"ಯಪ್ಪಾ.. "

ಗೋಪಿ ಹಂಗೇ ಒಂದ್ಸಲ ಆಚೆ ರೂಮ್ ಇಣುಕಿ ನೋಡಿದ, ಅಮೇಲೆ ಕೇಳಿದ.

"ಆಚೆಯಲ್ಲಿ ಕುರ್ಚಿಗಳು ಇದಾವಲ್ಲೋ ಅದನ್ನ ತಂದು ಇಟ್ಕೊಬೋದಿತ್ತಲ್ಲೋ.."

"ತರ್ಬೋದಿತ್ತು, ಆದ್ರೆ ರಾತ್ರಿ ಮಲಗುವಾಗ ಇಲ್ಲಿ ಹಾಸಿಗೆ ಹಾಕಕ್ಕೆ ಜಾಗ ಬೇಕು ಅಂತ ಮತ್ತೆ ಅದನ್ನ ಆಚೆ ತಗೊಂಡೋಗಿಡ್ಬೇಕಲ್ಲ, ಸುಮ್ನೆ ಯಾಕೆ ಅಂತ ಇಲ್ಲೇ ಟೇಬಲ್ ಮೇಲೇ ಕೂತ್ಕೊಂಡೆ ಕಣೋ.."

ಅದ್ಯಾಕೆ ಬಂದಿದ್ದು ಅಂತ್ಲೂ ಹೇಳದೇ ಗೋಪಿ ಹೊರಟ, ಇವನು ಕೂಗಿ ಹೇಳಿದ.

"ಗೋಪಿ ಹಂಗೇ ಬಾಗಿಲು ಎಳ್ಕೊಂಡು ಹೋಗೋ.."

Comments !