ARAVINDA VISHWANATHAPURA

ಲಿನಕ್ಸಿನಲ್ಲಿ ಕನ್ನಡ

Nov 8, 2011
1 minute read.
ಲಿನಕ್ಸ್ ಕನ್ನಡ ಅಧ್ಯಯನ kannadablog

ಈಗಾಗ್ಲೇ ಎಷ್ಟೋಂದು ಜನ ಇದ್ರ ಬಗ್ಗೆ ಹೇಳಿದಾರೆ, ಇವನೇನು ಹೊಸತು ಹೇಳೋದಕ್ಕೆ ಹೊರಟಿದಾನೆ ಅಂದುಕೊಂಡಿರಾ? ಲಿನಕ್ಸಿನಲ್ಲಿ ಕನ್ನಡ ಓದುವುದು ಮತ್ತು ಬರೆಯುವುದರ ಬಗ್ಗೆ ಈಗಾಗಲೇ ಎಷ್ಟೋ ಕಡೆ ಓದಿರುತ್ತೀರ. ಆದರೆ DTPಗಾಗಿ ಬಳಸಲು ಪ್ರಯತ್ನ ಮಾಡಿದಾಗ ದಾರಿಯೇ ಕಾಣದೆ ಕುಸಿಯುತ್ತೇವೆ. ಆ ತಂತ್ರಾಂಶ ಈ ತಂತ್ರಾಂಶ ಎಂದು ಎಲ್ಲವನ್ನೂ ಅನುಷ್ಟಾಪಿಸಿ ಕೊನೆಗೆ ಯಾವುದರಲ್ಲೂ ನಮಗೆ ಬೇಕಾದ್ದು ಸಾಧಿಸಲಾಗದೆ ನಿರಾಸೆಗೊಳ್ಳುತ್ತೀವಿ.

ಲಿನಕ್ಸಿನಲ್ಲಿ ಕನ್ನಡ ಸಾದ್ಯ ಎಂದಾಗ ಎಷ್ಟರ ಮಟ್ಟಿಗೆ ಎಂಬುದು ನಮಗೇ ಉತ್ತರಿಸಲಾಗದ ಪ್ರಶ್ನೆ. ಮುಕ್ತ ತಂತ್ರಾಂಶವಲ್ಲವೇ ಹಾಗಿದ್ದಲ್ಲಿ ನಮಗೆ ಬೇಕಾದಂತೆ ಬದಲಾಯಿಸಕೊಳ್ಳಬಹುದಲ್ಲವೇ? ನಿಜ ಬದಲಾಯಿಸಿಕೊಳ್ಳಬಹುದು ಆದರೆ ಅದಕ್ಕೂ ಮುನ್ನ ಆ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿಯಬೇಕಲ್ಲವೇ? ಕೆಲವೊಂದು ತೊಂದರೆಗಳಿಗೆ ಪರಿಹಾರ ನಾವೇ ಕೊಡಬೇಕು ಎಂದಿಲ್ಲ, ಆ ತಂತ್ರಾಂಶ ತಯಾರಕರಿಗೆ ಇರುವ ತೊಂದರೆಗಳನ್ನು ಹೇಳಿದರೂ ಸಾಕು. (ಉದಾ: ಇಲ್ಲಿ, `https://bugzilla.redhat.com/show_bug.cgi?id=559462[ಇಲ್ಲಿ] ಮತ್ತು ಇಲ್ಲಿ)

ಏನೇನು ತೊಂದರೆಗಳಿವೆ ಹಾಗೂ ಏನೇನು/ಹೇಗೆ ಸರಿಪಡಿಸಬೇಕು ಎಂದು ಎಲ್ಲೂ ಸರಿಯಾದ ಮಾಹಿತಿಯಿಲ್ಲ. ಕೆಲವು ದಿನಗಳ ಹಿಂದೆ ನನಗಾದ ತೊಂದರೆಗಳ ಮೂಲ ಹಿಡಿದು ಹೊರಟಾಗ ಬಹಳಷ್ಟು ವಿಷಯಗಳು ತಿಳಿದವು, ಅವುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಓದುವಾಗಿನ ತೊಂದರೆಗಳು

ಕನ್ನಡ ಅಥವಾ ಯಾವುದೇ ಭಾಷೆ ಓದಲು ಮುಖ್ಯವಾಗಿ ಬೇಕಾಗಿರುವುದು ರೆಂಡರಿಂಗ್ engine ಹಾಗು Font. ಡೆಸ್ಕ್ ಟಾಪ್ ಗಳಲ್ಲಿ Gnome, KDE, Xfce ಆಯ್ಕೆಗಳಿರುವಂತೆ ಕನ್ನಡವನ್ನು(ಅಥವಾ ಯಾವುದೇ ಭಾಷೆಯನ್ನು) ನಮಗೆ ಕಂಪ್ಯೂಟರ್‌ನಲ್ಲಿ ಕನ್ನಡ ತೋರಿಸುವ ಸಲುವಾಗಿಯೇ ಬಹಳಷ್ಟು ರೆಂಡರಿಂಗ್ engineಗಳಿದ್ದಾವೆ. ಒಂದರಲ್ಲಿ ಬಗೆಹರಿದಿರುವ ತೊಂದರೆ ಮತ್ತೊಂದರಲ್ಲಿ ಇನ್ನೂ ಉಳಿದಿರುವ ಸಾದ್ಯತೆಗಳು ಇವೆ. ಇನ್ನು ಕೆಲವು fontನಲ್ಲಿರುವ ತೊಂದರೆಯಿಂದಾಗಿ ಕನ್ನಡವನ್ನು ಓದಲೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.

ಬಳಕೆದಾರನಿಗೆ ಏನಾದರೂ ತೊಂದರೆಯಾದಾಗ ಅದು ಫಾಂಟ್‌ನಿಂದಾಗಿ ಆದ ತೊಂದರೆಯೋ ರೆಂಡರಿಂಗ್ ನ ತೊಂದರೆಯೋ ಎಂದು ತಿಳಿಯದೆ ಒದ್ದಾಡುತ್ತಾನೆ. ಅದನ್ನು ಸರಿಪಡಿಸಬೇಕಾದರೆ ಯಾರಿಗೆ ಹೇಳಬೇಕು ಅಂತನೂ ತಿಳಿಯದೇ ಸರಿಪಡಿಸಲೂ ಆಗದೆ ಸುಮ್ಮನಾಗುತ್ತಾರೆ. ಅದೂ ಅಲ್ಲದೆ ಒಂದು ತಂತ್ರಾಂಶ ತಯಾರಕರಿಗೆ ಹೇಳಿದರೆ ಸಾಲದು, ಪ್ರತಿಯೊಂದು ರೆಂಡರಿಂಗ್ ಇಂಜಿನ್‌ನಲ್ಲಿಯೂ ಸರಿಪಡಿಸಬೇಕು.

ಇನ್ನು ಕೆಲವಷ್ಟು ಜನ True Type ಫಾಂಟ್ ನಿಂದ ಕನ್ನಡ ಸಾಧ್ಯವಿಲ್ಲ, Open Type ಫಾಂಟ್ ಬೇಕೇ ಬೇಕು ಅಂತಾರೆ, ಆದರೆ True Type ಹಾಗೂ Open Typeಗೆ ಬಹಳಷ್ಟು ವತ್ಯಾಸವೇನಿಲ್ಲ. Open Type ಫಾಂಟ್ True Type tables ಅನ್ನೂ ಸಪೋರ್ಟ್ ಮಾಡುತ್ತದಾದುದರಿಂದ ಒಂದರಿಂದ ಇನ್ನೊಂದಕ್ಕೆ ಬದಲಾಯಿಸುವುದಕ್ಕೆ ಅಷ್ಟೋಂದು ಕಷ್ಟವಾಗಲಾರದು. ಹೆಚ್ಚಿನ ಮಾಹಿತಿಗಾಗಿ ಇದನ್ನು ಓದಿ.

ಲಿನಕ್ಸಿನಲ್ಲಿ ಮುಖ್ಯವಾಗಿ ಬಳಸುತ್ತಿರುವ ರೆಂಡರಿಂಗ್ ಇಂಜಿನ್‌ಗಳು ICU, Pango, QT, m17n, Harfbuzz ಇತ್ಯಾದಿ ಇತ್ಯಾದಿ. ಅಬ್ಬಾ ಇಷ್ಟೋಂದಾ ಅಂತ ತಲೆತಿರುಗಿ ಬೀಳಬೇಡಿ. :) ಇಷ್ಟೋಂದೆಲ್ಲಾ ರೆಂಡರಿಂಗ್ ಇಂಜಿನ್ ಏಕೆ ಎಂದು ನನಗೂ ಸಿಗದಿರುವ ಉತ್ತರ. ನಾನು ಹೇಳಿರುವ ಪಟ್ಟಿಯಲ್ಲಿರುವ ಕೊನೆಯದು(Harfbuzz) ಎಲ್ಲವನ್ನೂ ಒಂದುಗೂಡಿಸುವ ಸಲುವಾಗಿ ಪ್ರಾರಂಭಿಸಿದ ಯೋಜನೆ, ಅದಿನ್ನೂ ನಿರ್ಮಾಣ ಹಂತದಲ್ಲಿದೆ. ಅವರ ಯೋಜನೆ ಯಶಸ್ವಿಯಾದರೆ ನಮಗೂ ನೆಮ್ಮದಿ :). ಆ ಯೋಜನೆಯ ಬಗ್ಗೆ ಬರೆದಿರುವುದನ್ನು ಇಲ್ಲಿ ಓದಿ.

ಇಷ್ಟೆಲ್ಲಾ ಉದ್ದದ ಪಟ್ಟಿ ಕೊಟ್ಟು ಬಿಟ್ಟರೆ ತೊಂದರೆ ಯಾವುದರಲ್ಲಿ ಎಂದು ಹೇಗೆ ಕಂಡು ಹಿಡಿಯುವುದು? ಬಹಳಷ್ಟು Gnome/Gtk ಅಪ್ಲಿಕೇಷನ್ ಗಳು Pango ಬಳಸುತ್ತವೆ. ಅದೇ KDEಯಲ್ಲಿ ಇರುವ ಅಪ್ಲಿಕೇಷನ್ ಗಳು Qt shaping engine ಬಳಸುತ್ತವೆ. Open/Libre Office ಮತ್ತು XeLaTeX ತಂತ್ರಾಂಶಗಳು ICU ಬಳಸುತ್ತವೆ. ಇನ್ನು Emacs m17n ಬಳಸುತ್ತದೆ.

ಏನಾದರೂ ತಪ್ಪು ಕಾಣಿಸಿದಾಗ ಅದು ಫಾಂಟ್ ನ ತೊಂದರೆಯೋ ಅಥವಾ ರೆಂಡರಿಂಗ್ ತೊಂದರೆಯೋ ಎಂದು ಕಂಡು ಹಿಡಿಯುವುದು ಸುಲಭ. ಟೆಸ್ಟ್ ಮಾಡಬೇಕಾದ ಪಠ್ಯವನ್ನು ಬೇರೆ ಬೇರೆ ತಂತ್ರಾಂಶಗಳಲ್ಲಿ ಬರೆದು ನೋಡಿ. ಉದಾಹರಣೆಗೆ ಕೆಳಗಿನ ಎಲ್ಲಾ ಚಿತ್ರಗಳನ್ನು ನೋಡಿ. m17nನಲ್ಲಿ ಮಾತ್ರ ಏನೋ ತೊಂದರೆಯಿದೆ.

ಲಿನಕ್ಸ್

ಆದರೆ ಎಲ್ಲಾದರಲ್ಲೂ ತೊಂದರೆ ಬಂದರೆ ಫಾಂಟೋ ಅಥವ ರೆಂಡರಿಂಗ್‌ನ ತೊಂದರೆಯೋ ಎಂದು ಕಂಡುಹಿಡಿಯುವುದು ಕಷ್ಟ. ಹಾಗೆಯೇ image:/images/rank/m.png ಎಂದು ಬರೆಯುವುದು ಇನ್ನೂ ಸರಿಯಾಗಿ ಸಾಧ್ಯವಾಗಿಲ್ಲ. ಬರೆಯುವ ವಿಧಾನ ತಿಳಿದಿದ್ದು ಫಾಂಟ್ ಗಳು ಸರಿಯಿದ್ದರೂ ಕೂಡ ಬರೆಯಲು ಸಾಧ್ಯವಾಗುತ್ತಿಲ್ಲ. ಈಗಿನಂತೆ ಸರಿಯಾಗಿ ತೋರಿಸುತ್ತಿರುವ ಒಂದೇ ಒಂದು ರೆಂಡರಿಂಗ್ ಇಂಜಿನ್ ಎಂದರೆ m17n. ಹಿಂದಿನ ಉದಾಹರಣೆಯಲ್ಲಿ ಸೋತಿದ್ದ m17n ಈ ವಿಷಯದಲ್ಲಿ ಗೆದ್ದು ಬಿಟ್ಟಿದೆ. :)

ರ‍್ಯಾಂಕ್

ಎಲ್ಲಾ ಒತ್ತಕ್ಷರಗಳೂ ಸರಿಯಾಗಿ ಬರುತ್ತಿರುವಾಗ rank ಬರೆದಾಗ ಯಾಕೆ ಸರಿ ಬರೋಲ್ಲ? "ರ" ಒಂದು ತರಹದಲ್ಲಿ ವಿಭಿನ್ನ ಅಕ್ಷರ, ಕೆಲವೊಮ್ಮೆ ಅರ್ಕಾವತ್ತು ಬರ್ಬೇಕು ಅಂತೀವಿ, ಆದರೆ ಇನ್ನೊಂದು ಕಡೆ ಅದಕ್ಕೆ ಅರ್ಕಾವತ್ತು ಬರಬಾರದು ಅಂತೀವಿ. ಕಂಪ್ಯೂಟರ್ ಗೆ ಯಾವ ಸಂಧರ್ಭದಲ್ಲಿ ಯಾವುದನ್ನು ಬರೆಯಬೇಕು ಎಂದು ತಿಳಿಸಲು Zero Width Joiner ಎಂಬ ಪ್ರಿಂಟ್‌ನಲ್ಲಿ/ನೋಡಲು ಕಾಣದ ಅಕ್ಷರವನ್ನು ಮಧ್ಯ ಸೇರಿಸಲು ಹೇಳಿದರು. ಈ ಅಕ್ಷರ ಮಧ್ಯದಲ್ಲಿ ಇದ್ದರೆ ಅರ್ಕಾವತ್ತು ಬರಬಾರದು, ಅದು ಇಲ್ಲದಿದ್ದರೆ ಅರ್ಕಾವತ್ತು ಬರಬೇಕು ಎಂಬ ಮಾನ್ಯತೆ ತರಲಾಯಿತು. ಆದರೆ ರೆಂಡರಿಂಗ್ ಇಂಜಿನ್‌ಗಳಲ್ಲಿ ZWJ ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ, ಹಾಗಾಗಿ ಮೇಲೆ ತೋರಿಸಿದಂತೆ ಹೇಗೇಗೋ ಬರುತ್ತಿದೆ.

rank typing

ಫಾಂಟ್ ಗಳ ತೊಂದರೆಗಳು ಎಂದರೆ

  1. ಕೆಲವು ಅಕ್ಷರಗಳು ಕಾಣಿಸದೇ ಇರುವುದು ಉದಾಹರಣೆಗೆ - (hyphen) ಬರೆದರೂ ಕೂಡ ಕಾಣಿಸದೇ ಇರುವುದು.

  2. ಆಕೃತಿ ತಪ್ಪಾಗಿರುವುದು. ಉದಾ: ಲೋಹಿತ್ ಫಾಂಟ್ ನಲ್ಲಿದ್ದ "ಅ" ಅಕ್ಷರದ ತೊಂದರೆ

  3. ವ್ಯಂಜನಗಳನ್ನು ಬರೆದಾಗ ಸರಿಯಾಗಿ ಸೇರದೇ ಇರುವುದು.

  4. ಒಂದು ಅಕ್ಷರಕ್ಕೂ ಇನ್ನೊಂದು ಅಕ್ಷರಕ್ಕೂ ಇರುವ ಜಾಗ ಎಲ್ಲಾ ಕಡೆಯೂ ಒಂದೇ ರೀತಿ ಇಲ್ಲದಿರುವುದು.

  5. ಎಲ್ಲಾ ಅಕ್ಷರಗಳ ಎತ್ತರ ವ್ಯತ್ಯಾಸವಿರುವುದು.

  6. ಒತ್ತಕ್ಷರ ಓದಲಾಗದಷ್ಟು ಒಂದಕ್ಕೊಂದು ಸೇರಿಕೊಂಡಿರುವುದು.

  7. ತಪ್ಪಾಗಿ ಬರುವ ಅಕ್ಷರಗಳು. ಉದಾ: "ಮೂ"(muu) ಬರೆದಾಗ "ಮಾ"(maa) ಎಂದಾಗುವುದು.

ಇನ್ನೂ ಬಹಳಷ್ಟು ತೊಂದರೆಗಳಿವೆ, ನಿಮಗೆ ಎದುರಾದ ತೊಂದರೆಗಳನ್ನು ತಿಳಿಸಿ.

ಬರೆಯುವಾಗಿನ ತೊಂದರೆಗಳು

ನಮ್ಮ ಅದೃಷ್ಟಕ್ಕೆ ಎಲ್ಲಾ ತಂತ್ರಾಂಶಗಳೂ ibus ಎನ್ನುವ input method ಬಳಸುತ್ತಿವೆ.(ಮುಂಚೆ Scim ಬಳಸುತ್ತಿದ್ದರೂ ಅದೂ ಕೂಡ m17n-db ಯನ್ನೇ ಬಳಸುವುದರಿಂದ ಟೈಪಿಂಗ್‌ನಲ್ಲಿ ಬದಲಾವಣೆಯಾಗಲ್ಲ) ಇದರಲ್ಲೂ ವೈವಿದ್ಯ ಇದ್ದಿದ್ದರೆ ತೊಂದರೆಗಳನ್ನು ಸರಿಪಡಿಸುವುದೇ ದೊಡ್ಡ ಕೆಲಸವಾಗಿ ಬಿಡುತ್ತಿತ್ತು. ಬರೆಯುವ ತೊಂದರೆಗಳನ್ನು ಸರಿಪಡಿಸುವುದು ರೆಂಡರಿಂಗ್ ತೊಂದರೆ ಸರಿಪಡಿಸುವುದಕ್ಕಿನ್ನಾ ಸುಲಭ. ಕೆಲವು ಅಕ್ಷರ ಟೈಪಿಸಲು keyboard shortcut ತಿಳಿಯುತ್ತಿರಲಿಲ್ಲ ಮತ್ತೆ ಕೆಲವು ತಪ್ಪುಗಳೂ ಇದ್ದಾವೆ(ಉದಾ: "ಳ್ಳಿ" ಬರೆಯಲು ಹೊರಟಾಗ "LLi" ಆಗ್ತಿತ್ತು. ಬಹುಷಃ ಈಗ ಸರಿಯಾಗಿರಬಹುದು). m17n-db ಹೇಗೆ ಮಾಡುವುದು ಎಂದು ತಿಳಿದುಕೊಂಡರೆ ಕನ್ನಡ ಬರೆಯುವಾಗಿನ ತೊಂದರೆಗಳನ್ನು ಸರಿಪಡಿಸಬಹುದು ಹಾಗೂ ನಮಗೆ ಬೇಕಾದಂತೆ ಬದಲಾಯಿಸಿ ಇನ್ನೊಂದು input method(itrans, kgp, inscript ಇರುವಂತೆ) ಕೂಡ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ.

ಹೇಗೆ ಸರಿಪಡಿಸಬಹುದು?

ಇರುವ ತೊಂದರೆಗಳನ್ನೆಲ್ಲಾ ಕಲೆಹಾಕಿ ಒಂದೊಂದಾಗಿ ಪರಿಹರಿಸುವ ಯೋಚನೆಯಿದೆ, ಇಂತಿಷ್ಟೇ ಸಮಯದಲ್ಲಿ ಎಲ್ಲವನ್ನೂ ಸರಿಪಡಿಸುತ್ತೇವೆಂದು ಅಂದುಕೊಂಡಿಲ್ಲದಿದ್ದರೂ ನಮ್ಮ ಕೈಲಾದಷ್ಟು ತಪ್ಪುಗಳನ್ನು ಕಡಿಮೆ ಮಾಡಿ, DTP ಅಥವಾ ಇನ್ಯಾವುದೇ ತರಹದಲ್ಲಿ ಲಿನಕ್ಸಿನಲ್ಲಿ ಕನ್ನಡ ಬಳಸಲು ತೊಂದರೆ ಇರಬಾರದು ಎಂಬ ಆಶಯ.

ರೆಂಡರಿಂಗ್ ಇಂಜಿನ್ ಗಳ ತೊಂದರೆಗೆ ಆಯಾ ತಂತ್ರಾಂಶ ತಯಾರಿಕರಿಗೆ ತೊಂದರೆಗಳನ್ನು ಹೇಳಿ ಸರಿಪಡಿಸುವುದೊಂದೇ ದಾರಿ ಅನ್ನಿಸುತ್ತೆ, ಆದರೆ ಫಾಂಟ್ ಹಾಗೂ input methodsನ ತೊಂದರೆಗಳನ್ನು ನಾವು ಖಂಡಿತ ಸರಿಪಡಿಸಬಹುದು. ಲಿನಕ್ಸ್ನಲ್ಲಿ ಕನ್ನಡ ಓದುವಾಗ ಬರೆಯುವಾಗ ನಿಮಗೆ ಎದುರಾದ ತೊಂದರೆಗಳನ್ನು ಕಮೆಂಟ್ ಗಳಲ್ಲಿ ಹೇಳಿ. ಒಂದೊಂದಕ್ಕೇ ಪರಿಹಾರ ಹುಡುಕಿ ಸರಿಪಡಿಸೋಣ.

ನಾನು ಫಾಂಟ್ ಅದ್ಯಯನ ಮಾಡಲು ಹಾಗೂ ಅದರ ತೊಂದರೆಗಳನ್ನು ಸರಿಪಡಿಸಲು ಬಳಸಿದ/ಬಳಸುವ ತಂತ್ರಾಂಶ Fontforge.

ಲಿನಕ್ಸಿನಲ್ಲಿ ಕನ್ನಡ ನಲಿದಾಡಲು ಕೈ ಜೋಡಿಸುತ್ತೀರಲ್ಲವೇ?

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in