ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್ ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ !

ಫ್ರೆಂಡ್ಸ್ ಗೆ ಕಾಲ್ ಮಾಡಿದಾಗ ಅಥವಾ ಅವ್ರೇ ಕಾಲ್ ಮಾಡಿದಾಗ ಬರೀ ಹಬ್ಬದ ವಿಷ್ಯ ಮಾತಾಡಿ ಬೈಸಿಕೊಂಡಿದೀನಿ.("ಏನೋ ಮೂರು ಹೊತ್ತೂ ಇದೇ ಯೋಚ್ನೆನಾ ನಿಂಗೆ" ಅಂತ). ಎಲ್ಲಾ ಒಟ್ಟಾಗಿ ಕೆಲ್ಸ ಮಾಡೋ ಮಜಾನೇ ಸಕತ್ತಾಗಿತ್ತು. ಹಬ್ಬದ ವಿಷ್ಯ ಚರ್ಚೆ ಮಾಡಕ್ಕೆ wiki ಮತ್ತೆ IRC ಬಳಸ್ತಾ ಇದ್ವಿ, ನಾನು ಇದಕ್ಕೂ ಮುಂಚೆ IRC ಬಳಸಿಯೇ ಇರ್ಲಿಲ್ಲ. ಹಬ್ಬಕ್ಕೆ ಕೆಲ್ಸ ಮಾಡುವಾಗ ದಿನೇ ದಿನೇ ಹೊಸ ವಿಷ್ಯ ಗೊತ್ತಾಗುತ್ತಿತ್ತು.

ಆಫೀಸಲ್ಲಿ ಸರಿಯಾಗಿ ಕೆಲ್ಸ ಮಾಡಕ್ಕೆ ಆಗ್ತಿರ್ಲಿಲ್ಲ, ಬೆಳಗ್ಗೆ ಹತ್ತು ಗಂಟೆ ಆದ ತಕ್ಷಣ ಪವನ್ ನ, ರಾಘವ್ ನ ಕಾಫಿ ಕುಡ್ಯಕ್ಕೆ ಬರ್ತೀರಾ ಅಂತ ಕೇಳೋದು, ಎಲ್ಲಾರೂ ಅದ್ಕೇ ಕಾಯ್ತಿದ್ವೇನೋ ಅನ್ನೊ ಹಾಗೆ ಒಟ್ಟಿಗೆ ಕಾಫಿಗೆ ಹೋಗೋದು. ಅಲ್ಲಿ ಕಾಫಿ ಕುಡೀತಾ ಮತ್ತೆ ಹಬ್ಬಕ್ಕೆ ಏನು ಮಾಡಿದ್ರೆ ಚೆನಾಗಿರುತ್ತೆ ಅಂತ ಮಾತಾಡ್ತಿದ್ವಿ. ಪವನ್ ಅಂತೂ ನನ್ನ ನೋಡಿ ನಗ್ತಾ ಇದ್ದ, ಸಲ್ಪ ಆಫೀಸ್ ಕೆಲ್ಸನೂ ಮಾಡೋ ಅಂತ ;) ಅವ್ನಂತೂ ಬೇಗ ಬೇಗ ಆಫೀಸ್ ಕೆಲ್ಸ ಮುಗ್ಸಿ ಸಂಜೆ ಮನೇಲಿ ಪ್ರಯೋಗ ಶುರು. ಒಂದಿನ ನಮ್ಮ ಮ್ಯಾನೇಜರ್ ಗೆ ಹೇಳ್ದೆ , ನಂಗೆ ಕೆಲ್ಸದಲ್ಲಿ ಗಮನ ಕೊಡೋಕೆ ಆಗ್ತಾನೇ ಇಲ್ಲ ಹಂಗಾಗಿ ಕೆಲ್ಸ ಸಲ್ಪ ನಿಧಾನ ಆಗ್ಬೋದು, ಹಬ್ಬ ಮುಗಿದ್ಮೇಲೆ ಬೇಗ ಮುಗಿಸ್ತೀನಿ ಅಂತ. ಅವರಿಗೂ ನನ್ನ ಪರಿಸ್ತಿತಿ ಅರ್ಥ ಆಗಿತ್ತು ಹಂಗಾಗಿ OK ಅಂದ್ರು. (ಅದೇ ಕೆಲ್ಸ ಗಳು ಈಗ ತಲೆ ಮೇಲೆ ಕೂತಿದ್ರಿಂದ ಇಷ್ಟು ದಿನ ಬ್ಲಾಗ್ ಬರೆಯಲು ಬಿಡುವಿಲ್ಲದ ಹಾಗೆ ಮಾಡಿತ್ತು.)

ಹಿಂಗೇ ನಾನು, ಪವನ್ ಮತ್ತೆ ರಾಘವ್ ಮಾತಾಡ್ತಿದ್ದಾಗ, "ನಾನು ಶುಕ್ರವಾರ, ಸೋಮವಾರ ಎರಡೂ ದಿನ ರಜ ಹಾಕ್ತೀನಿ" ಅಂದ ರಾಘವ.(ಶನಿವಾರ ಹಬ್ಬ ಇದ್ದಿದ್ದು) ಅರರೇ ನಂಗೆ ಈ ಐಡಿಯಾನೇ ಹೊಳೀಲಿಲ್ವಲಾ ಅಂತ ನಾನೂ ಶುಕ್ರವಾರ ರಜ ಹಾಕಿದೆ. (ರಾಘವಂಗೆ ಥ್ಯಾಂಕ್ಸ್ ಈ ಐಡಿಯಾ ಕೊಟ್ಟಿದ್ದಕ್ಕೆ)

ಏನೋ ಈ ವೀಕೆಂಡ್ ಪ್ಲಾನ್ ಅಂತ ಕೇಳೋ ಫ್ರೆಂಡ್ಸ್ ಗೆ ಹಬ್ಬದ ಮೀಟಿಂಗ್ ಇದೆ ಕಣೋ ಅಂತ ಹೇಳೋದೇ ಗಮ್ಮತ್ತಾಗಿತ್ತು. ಮೀಟಿಂಗ್ ಗೆ ಮೈಸೂರಿಂದ ಬೆಂಗಳೂರಿಗೆ ಹೋಗುವಾಗ ಬಸ್ ಅಲ್ಲಿ ಪವರ್ ಕಾರ್ಡ್ ಇದ್ದಿದ್ರೆ ಲ್ಯಾಪ್ ಟಾಪ್ ಅಲ್ಲಿ ಕೆಲ್ಸ ಮಾಡ್ಕೊಂಡು ಹೋಗ್ಬೋದಿತ್ತು ಅಂತ ಪೇಚಾಡಿಕೊಂಡಿದ್ದಿದೆ. ಮೀಟಿಂಗ್ ಗಳನ್ನ ನಾಲ್ಕು ಗೋಡೆಗಳ ಮದ್ಯ ಮಾಡೋ ಬದ್ಲು ಪಾರ್ಕ್ ಅಲ್ಲಿ ಮಾಡಿದ್ದು ಕೂಡಾ ಚೆನಾಗಿತ್ತು. ಸಂಪದದಲ್ಲಿ ಬ್ಲಾಗುಗಳ ಮೂಲಕವಷ್ಟೇ ಪರಿಚಯವಾದವರನ್ನು ನಿಜವಾಗಲೂ ಬೇಟಿ ಮಾಡುವ ಅವಕಾಶ ಸಿಕ್ಕಿತು.

ಹಬ್ಬದ ಬಗ್ಗೆ ಎಲ್ಲಾರ್ಗೂ ಹೇಳೋವಾಗ ಸಂಪದದ ಹಬ್ಬದ ಪುಟದ ಉದ್ದದ ಲಿಂಕ್(URL) ಹೇಳ್ಬೇಕಲ್ಲಾ ಅಂತ ಯೋಚ್ನೆ ಮಾಡೋ ಅಷ್ಟರಲ್ಲಿ ಶಿವು ಮತ್ತೆ ಹರಿ ಸೇರಿ ಹಬ್ಬಕ್ಕೇ ಒಂದು ಅಂತರ್ಜಾಲ ಪುಟ ಮಾಡಿದ್ರು, ಚೆಂದದ ಹೆಸ್ರು www.habba.in , ಎಲ್ಲಾರ್ಗೂ ಹೇಳ್ಕೋಳೋದೇ ಒಂದು ಸಂಭ್ರಮ.

ಈ ಸಂಭ್ರಮದ ಜೊತೆಗೆ ಮತ್ತೊಂದು ಅನ್ನೋ ಹಾಗೆ, ನ್ಯೂಸ್ ಪೇಪರ್ ನಲ್ಲಿ ಹಬ್ಬದ ಸುದ್ದಿ ಬಂದಿದೆಯಂತೆ ಅಂತ ಈಮೈಲ್ ಬರ್ತಿತ್ತು. ಅದನ್ನ ನೋಡಿ ಪೇಪರ್ ಅಂಗಡಿಗೆ ಹೋಗಿ ಕೇಳ್ಕೊಂಡು ಬರೋದು, ದುರಾದೃಷ್ಟಕ್ಕೆ ಮೈಸೂರು ಪೇಪರ್ ಗಳಲ್ಲಿ ಬರ್ಲೇ ಇಲ್ಲ. :( ಹಂಗಾಗಿ ಆನ್ ಲೈನ್ ಪೇಪರ್ ಗಳನ್ನೇ ಸೇವ್ ಮಾಡಿಟ್ಟು ಕೊಂಡ್ವಿ. :)

ಇತ್ತೀಚೆಗೆ ಕಲ್ಪನಾರವರು ಒಂದು ಬ್ಲಾಗಿಗೆ ಪ್ರತಿಕ್ರಿಯಿಸಿದ್ದರು. ಆ ಹಾಡೇನಾದ್ರು (ಚೆಲುವಯ್ಯ ಚೆಲುವೋ ತಾನಿತಂದಾನಾ....) ಮೊದ್ಲೇ ಸಿಕ್ಕು ಬಿಟ್ಟಿದ್ರೆ ಅದನ್ನ ಹೇಳ್ಕೊಂಡು ಕುಣಿದೇ ಬಿಟ್ತಿದ್ವೇನೋ :)

ಹಬ್ಬದ ದಿನ ಹತ್ತಿರ ಬರ್ತಾ ಇತ್ತು, ಮೊಬೈಲ್ ಗೆ ಇನ್ನು ಹಬ್ಬದ ಜ್ವರ ಬಂದಿಲ್ವಲಾ ಅಂತ ಗ್ನು ಮತ್ತೆ ಪೆಂಗ್ವಿನ್ ನ ಚಿತ್ರ ಬಳಸಿ ಒಂದು ವಾಲ್ ಪೇಪರ್ ಮಾಡಿ ಮೊಬೈಲ್ ಗೆ ಹಾಕಿಕೊಂಡೆ.

ಶುಕ್ರವಾರ ರಾತ್ರಿ IISC ಗೆ ಹೋದಾಗ ಅಲ್ಲಿ ಜಾಗ ಬಹಳ ಕಡಿಮೆ ಇರೋದು ರಿಜಿಸ್ಟ್ರೇಷನ್ 300 ದಾಟಿದೆ ಅಂತ ಹರಿ ಹೇಳಿದಾಗ ನಮಗೆಲ್ಲಾ ಗಾಭರಿ. ಹೆಂಗಪ್ಪಾ ಮ್ಯಾನೇಜ್ ಮಾಡೋದು ಅಂತ. ಆಮೇಲೆ ಎಲ್ಲಾರ ಮೊಬೈಲ್ ಗೂ ಮೆಸೇಜ್ ಮಾಡೋದು ಅಂತ ಡಿಸೈಡ್ ಮಾಡಿ ನನ್ನ ಮೊಬೈಲ್ ಅನ್ನು ಲ್ಯಾಪ್ ಟಾಪ್ ಗೆ ಜೋಡಿಸಿ ನೋಕಿಯಾ ಪಿಸಿ ಸೂಟ್ ಓಪನ್ ಮಾಡಿ ಮೆಸೇಜ್ ಕಳಿಸಲು ಎಲ್ಲಾ ರೆಡಿ ಮಾಡಿ ನಂಬರ್ ಗಳನ್ನ ಕೊಟ್ಟ್ರೆ ಅದು ನಕರಾ ಮಾಡ್ತು. ನಂಗೆ ನಂಬರ್ ಗಳು ಈ format ಅಲ್ಲಿ ಬೇಡ ಬೇರೆ format ಅಲ್ಲಿ ಕೊಟ್ರೆ ಮಾತ್ರ ಕೆಲ್ಸ ಮಾಡೋದು ಅಂತ (<number>;<number2>; ...) ತಕೋಳಪ್ಪ... ಇದ್ರದ್ದು ಒಳ್ಳೇ ಗೋಳಾಯ್ತಲ್ಲ ಅಂತ ರಾಘವ, ಶಿವು ಸೇರಿ ಅಲ್ಲೇ ಒಂದು ಸಣ್ಣ ಪ್ರೋಗ್ರಾಮು ಬರೆದು ಅದಕ್ಕೆ ಬೇಕಾದಂಗೆ ಬರೋ ಹಂಗೆ ಮಾಡಿ ಕೊಟ್ರು. ಆಮೇಲೆ ಎಲ್ಲಾರ್ಗೂ ಮೆಸೇಜ್ ಮಾಡಿದ್ವಿ (300 ನಂಬರ್ ಗಳನ್ನ ಒಂದೊಂದಾಗಿ ಆ format ಅಲ್ಲಿ ಬರೆಯೋದು ಆ ಸಮಯದಲ್ಲಿ ಸಾಧ್ಯ ಇರ್ಲಿಲ್ಲ) ಎಲ್ಲಾ ಮೆಸೇಜ್ ಗಳು ಒಟ್ಟಿಗೇ ಹೋಗ್ಲಿಲ್ಲ, ಮೊಬೈಲ್ outbox ಅಲ್ಲಿ ಇದ್ವು ಅಲ್ಲಿಂದ ಒಂದೊಂದಾಗಿ ಹೋಗ್ತಾ ಇತ್ತು. ಮಜಾ ಅಂದ್ರೆ ರಾತ್ರಿ 10 ಗಂಟೆ ಒಳಗೆ ನಿಮ್ಮ ಬರುವಿಕೆ ತಿಳಿಸಿ ಅಂತ ಇದ್ದ ಮೆಸೇಜ್ ಕೆಲವರಿಗೆ ತಲುಪುವಾಗ 10 ಗಂಟೆ ಮೇಲಾಗಿತ್ತು.

ಹಬ್ಬ ತುಂಬಾ ಚೆನ್ನಾಗಿ ಆಯ್ತು. ಕೆಲವರಿಗೆ ಹಬ್ಬಕ್ಕೆ ಬರುವ ಅವಕಾಶ ಸಿಗಲಿಲ್ಲ . ಮುಂದಿನ ಬಾರಿ ಹಬ್ಬ ಮಾಡುವಾಗ ಖಂಡಿತ ಚೆನ್ನಾಗಿ ಸ್ಥಳಾವಕಾಶ ಇರುವ ಜಾಗ ಆಯ್ಕೆ ಮಾಡಿಕೊಳ್ಳುತ್ತೇವೆ .

Comments !