ಕೆಂಪು Apache ಬೈಕೂ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ಕಳೆದ ವಾರ WiFi router ತಗೋಳೋಣ ಅಂತ ಆಫೀಸಿಂದ KT Street(ಮೈಸೂರು) ಕಡೆ ಹೊರಟೆ. ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು ಒಂದು ಶಾರ್ಟ್ ಕಟ್ ದಾರಿ ಇದೆ, ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ ಪೋಲೀಸಿನವ ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ ಹೋಗಪ್ಪಾ ಅಂದರು. ಅರೆ ಇವರು ಯಾಕೆ ನಿಲ್ಲಿಸೋಕೆ ಹೇಳಿದ್ರು, ಟ್ರಾಫಿಕ್ ಪೋಲೀಸ್ ಕೂಡಾ ಅಲ್ಲ ಅಂತ ಯೋಚಿಸುತ್ತಾ ಹಾಗೇ ಹೋದೆ. ಅಲ್ಲಿ ಮಾಂಡೋವಿ ಮೋಟಾರ್ಸ್ ಹತ್ತಿರ (ರೈಲ್ವೆ ಸ್ಟೇಷನ್ನಿಗೆ ತಿರುಗುವಲ್ಲಿ) ಮತ್ತೆ ಕೆಲವು ಮಂದಿ ಪೋಲೀಸರು ನನ್ನ ಬೈಕ್ ನಿಲ್ಲಿಸಿದ್ರು. ಯಾವೂರು ಏನು ಕಥೆ ಅಂತೆಲ್ಲಾ ವಿಚಾರಿಸಿದರು. ಒಬ್ಬ ಪೋಲೀಸ್ ಹೋಗು ಅಂದ್ರೂ ಇನ್ನೊಬ್ಬ ಬಿಡಲು ತಯಾರಿರಲಿಲ್ಲ. ಆಮೇಲೆ ನಾನು ಕೆಲಸ ಮಾಡುತ್ತಿರುವುದು ಎಲ್ಲಿ ಎಂದು ಕೇಳಿದ, ನಾನು ನಮ್ಮ ಕಂಪನಿಯ ಹೆಸರು ಹೇಳಿದ ಮೇಲೆ ಸಮಾಧಾನವಾಗಿ ನನ್ನನ್ನು ಹೋಗಲು ಬಿಟ್ಟ. ಅವರು ಹೋಗಲು ಹೇಳಿದ ಮೇಲೆ ನನಗೆ ಸಲ್ಪ ಧೈರ್ಯ ಬಂದು "ಏನು ವಿಷಯ ಸಾರ್" ಎಂದು ಕೇಳಿದೆ. ಅದಕ್ಕೆ ಅವನು "ಏನಿಲ್ಲ ಬಿಡಿ" ಅಂದ. ನಾನು ಮತ್ತೆ ಏನೂ ಕೇಳದೆ ಹೊರಟೆ. WiFi router ತಗೊಂಡೆ, ಇನ್ನೇನೂ ತೊಂದರೆ ಆಗದಿದ್ರೆ ಸಾಕಪ್ಪಾ ಅಂತ ಅಂದು ಕೊಳ್ಳುತ್ತಾ ಸೂರ್ಯಬೇಕರಿ ಹತ್ತಿರ ಇರುವ ನನ್ನ ರೂಮಿನ ಕಡೆ ಹೊರಟೆ. ಕಾಳಿದಾಸ ರೋಡಿನಿಂದ ವಿಧ್ಯಾವರ್ಧಕ ಕಾಲೇಜಿನ ರೋಡಲ್ಲಿ ಹೋಗುತ್ತಿದ್ದಾಗ ಮತ್ತೊಬ್ಬ ಪೋಲೀಸು ಗಾಡಿ ನಿಲ್ಲಿಸಲು ಹೇಳಿದ. ಏನಾಗ್ತಿದೆ ಇವತ್ತು ಅಂತ ಅರ್ಥ ಆಗ್ತಿರಲಿಲ್ಲ. ಗಾಡಿ ಡಾಕುಮೆಂಟ್ಸ್ ಎಲ್ಲಾ ತೋರಿಸು ಅಂದ. ನನ್ನ ಬೈಕ್ ನ ಸೀಟ್ ತೆಗೆದು ಅದರ ಕೆಳಗಿದ್ದ ಡಾಕುಮೆಂಟ್ಸ್ ತೆಗೆಯುವಷ್ಟರಲ್ಲಿ, ಅವನಿಗೇನನ್ನಿಸ್ತೋ ಏನೋ "ಹೋಗಪ್ಪಾ ನೀನು" ಅಂದ. ಇವರಾದರೂ ವಿಷಯ ಹೇಳ್ಬೋದು ಅನ್ನೋ ಆಸೆಯಿಂದ ಏನು ವಿಷಯ ಅಂತ ಕೇಳಿದೆ, ಅದಕ್ಕೆ ಅವರು ಹೇಳಿದ್ದಿಷ್ಟು.

ಅದ್ಯಾರೋ ಒಬ್ಬ ಕೆಂಪು Apache ಬೈಕ್ ನಲ್ಲಿ ಕಪ್ಪು ಟಿ ಶರ್ಟ್ ಹಾಕಿಕೊಂಡು ಚಿನ್ನದ ಸರ ಎಗರಿಸಿಕೊಂಡು ಹೋದನಂತೆ, ಹಂಗಾಗಿ ಎಲ್ಲಾ Apache ಬೈಕ್ ನವರನ್ನೂ , ಕಪ್ಪು ಟೀ ಶರ್ಟ್ ಹಾಕಿದೋರನ್ನೂ ವಿಚಾರಿಸ್ತಾ ಇದ್ದರಂತೆ.

Comments !