ಇಡ್ಲಿ ಪುರಾಣ
ಇದರಲ್ಲಿ ಬರುವ ಬಹಳಷ್ಟು ಸನ್ನಿವೇಶಗಳು ಕಾಲ್ಪನಿಕ, ಕೆಲವೊಂದು ನಿಜವಿರಲೂ ಬಹುದು :)
ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ,
"ಮಗಾ ಇವತ್ತು ನೀನು ಏನು ತಿಂಡಿ ತಗೊಂಡೆ ಹೇಳಲಾ?"
"ಹೇಳು"
"ಇಡ್ಲಿ ಅಲ್ವಾ? ;) "
"ಹೇ ಸಖತ್ ಕಣೋ ನೀನು, ಸೂಪರ್ ಆಗಿ guess ಮಾಡ್ತೀಯ ಕಣೋ…"
ಹಿಂಗಿರುವಾಗ….
ನಾನು ಕೂಪನ್ ತಗೋಳಕ್ಕೆ ಕೌಂಟರ್ ಹತ್ತಿರ ಹೋಗೋ ಅಷ್ಟರಲ್ಲೇ ಅವರು ಕೂಪನ್ ಹರಿದು ನನಗೆ ಕೊಡಲು ರೆಡಿ ಇಟ್ಟುಕೊಂಡಿರುತ್ತಾರೆ. ಹಿಂಗೇ ಕೂಪನ್ ತಗೊಂಡು ಇಡ್ಲಿ ಕೌಂಟರ್ ಹತ್ತಿರ ಹೋದೆ, ಇಬ್ಬರು ಮೂವರು ಜನ ಇದ್ದರು ಕ್ಯೂ ಅಲ್ಲಿ. ನಾನು ಹಂಗೇ ಏನೋ ಯೋಚನೆ ಮಾಡ್ತಾ ನಿಂತಿದ್ದೆ, ಕ್ಯೂ ಅಲ್ಲಿ ನಿಂತೋರು ಮುಂದೆ ಹೋಗಿದ್ದು ಗಮನಿಸಲಿಲ್ಲ. ಅಷ್ಟರಲ್ಲಿ ಆ ಕೌಂಟರ್ ನಲ್ಲಿದ್ದ ಹುಡುಗಿ "ಇಡ್ಲಿ ಇಲ್ಲಿ ಬನ್ರೀ" ಅಂತ ಕರೆದ್ಲು, ನಾನು ದಿನಾ ಇಡ್ಲಿ ತಿನ್ನೋದನ್ನ ನೋಡಿ ನಂಗೇ ಇಡ್ಲಿ ಅಂತ ಹೆಸರಿಟ್ಟು ಬಿಟ್ಟಳಾ ಅಂತ ಗಾಬರಿಗೊಂಡೆ, ಆಮೇಲೆ ಅರ್ಥ ಆಯ್ತು ಇಡ್ಲಿ ಕ್ಯೂನಲ್ಲಿ ನಿಂತಿರೋರು ಮುಂದೆ ಬನ್ನಿ ಅಂತ ಹೇಳಿದ್ದು ಅಂತ.
ಹಿಂಗೆಲ್ಲಾ ಆದ್ಮೇಲೂ ದಿನಾ ಇಡ್ಲಿ ತಿನ್ನೋದು ಸರಿಯಿರಲ್ಲ ಅಂತ ಮನಸಿಗೆ ಬಂತು. ಒಂದಿನ ಇಡ್ಲಿ ಬೇಡ ಅಂತ ಹೇಳಿ ಶ್ಯಾವಿಗೆ ಬಾತ್ ತಗೊಂಡೆ, ಅವತ್ತಂತೂ ಬೇರೆ ಕೂಪನ್ ತಗೊಂಡಿರೋದನ್ನ ಎಲ್ಲಾರಿಗೂ ತೋರಿಸೋಣ ಅಂತ ಸುತ್ತ ಹುಡುಕಿದೆ ಆದರೆ ಪರಿಚಯದವರ್ಯಾರೂ ಕಾಣಿಸಲೇ ಇಲ್ಲ. ನನ್ನ ಗೆಳೆಯಂಗೆ ನಾನು ಬೇರೆ ತಿಂಡಿ ತಿಂದೆ ಅಂದರೆ ನಂಬೋದಿಲ್ಲ ಇವತ್ತು ತೋರಿಸೋಣ ಅಂದರೆ ಅವ್ನು ಇನ್ನು ಬಂದೇ ಇಲ್ಲ. ಶ್ಯಾವಿಗೆ ಬಾತ್ ತಗೊಂಡೆ, ನನ್ನ ದುರಾದೃಷ್ಟಕ್ಕೆ ಅದು ಸರಿಯಾಗಿ ಬೆಂದಿರಲಿಲ್ಲ, ಸಲ್ಪವೂ ಚೆನ್ನಾಗಿರಲಿಲ್ಲ. ಕಷ್ಟಪಟ್ಟು ಸಲ್ಪ ತಿಂದೆ, ಆಮೇಲೆ ತಿನ್ನಲಾಗದೆ ಚೆಲ್ಲಲು ಹೋದೆ. ಅದೇ ಸಮಯಕ್ಕೆ ಸರಿಯಾಗಿ ಗೆಳೆಯ ಬಂದ, ನಾನು ಅದನ್ನ ಚೆಲ್ಲುತ್ತಿರೋದನ್ನ ನೋಡಿ "ಏನಮ್ಮಾ ಇಡ್ಲಿ ಬಿಟ್ಟು ಬೇರೇನೂ ಸೇರದೇ ಇಲ್ವಾ ?" ಅಂದ. ನಾನು ಹಂಗೇನಿಲ್ವೋ… ಅಂತೇನೋ ಹೇಳಕ್ಕೆ ಹೊರಟ ಮಾತು ಅದೇ ಸಮಯಕ್ಕೆ ಅವನ ಮೊಬೈಲ್ ಗೆ ಬಂದ ಕಾಲ್ ನ ರಿಂಗ್ ಟೋನ್ ನ ನಡುವೆ ಕೇಳಿಸಲೇ ಇಲ್ಲ.
ಮತ್ತೊಂದಿನ ಕ್ಯಾಂಟೀನ್ ಗೆ ಹೋಗಿದ್ದು ಲೇಟಾಗಿತ್ತು, ಇಡ್ಲಿ ಖಾಲಿಯಾಗಿ ಬಿಟ್ಟಿತ್ತು. ನನ್ನ ಗೆಳೆಯ ಮನಸಲ್ಲೇ ನಕ್ಕಿದ್ದು ನಂಗೆ ಜೋರಾಗೇ ಕೇಳಿಸಿತ್ತು. ಆಮೇಲೆ ಅರೆಮನಸ್ಸಿನಿಂದ ಬೇರೆ ತಿಂಡಿ ತಗೊಂಡೆ.
ಇಡ್ಲಿ ಪುರಾಣ ಹೇಳ್ತಾ ಹೋದ್ರೆ ಮುಗ್ಯೋದೇ ಇಲ್ಲ. ಸದ್ಯಕ್ಕೆ ನಾನು ನಿಲ್ಲಿಸಿರ್ತೀನಿ. :)
About Aravinda VK
Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage