ಹಾಸ್ಟೆಲ್ ನೆನಪು - ಜಾಗಿಂಗ್

ಒಂದು ಸಲ ಹಾಗೇ ಎಲ್ಲಾ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಗ್ಯದ ಬಗ್ಗೆ ಚರ್ಚೆ ಆಯ್ತು, ನಂತರ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಹೋಗಬೇಕು ವ್ಯಾಯಾಮ ಮಾಡಬೇಕು ಅಂತ ಯೋಚನೆ ಬಂತು. ಆ ಯೋಚನೆ ಒಬ್ಬನಿಗೇ ಬಂದರೆ ಪರವಾಗಿರ್ಲಿಲ್ಲ, ಆದರೆ ಮೂರ್ನಾಲ್ಕು ಜನಕ್ಕೆ ಆ ಯೋಚನೆ ಬಂದಿದ್ದರಿಂದ ಮರುದಿನದಿಂದ ಜಾಗಿಂಗ್ ಹೋಗೋದು ಅಂತ ತೀರ್ಮಾನ ಆಯ್ತು. ಸರಿ ಮೊದಲ ದಿನವಾದ್ದರಿಂದ ಒಪ್ಪಿಕೊಂಡ ಎಲ್ಲರೂ ಎದ್ದರು ನಮ್ಮ ಹಾಸ್ಟೆಲ್ ನಿಂದ ಲಾಲ್ ಬಾಗ್ ವರೆಗೂ ಓಡಿಕೊಂಡು ಹೋಗೋದು ಅಲ್ಲಿ ಸಲ್ಪ ವ್ಯಾಯಾಮ ಮಾಡಿ ಮತ್ತೆ ಅಲ್ಲೇ ಹತ್ತಿರದಲ್ಲಿ ಕಾಫಿ ಕುಡಿದು ವಾಪಸ್ ನಡೆದು ಬರೋದು ಅಂತ ಡಿಸೈಡ್ ಆಯ್ತು.

ಓಡುವುದರಲ್ಲಿ ಹಿಂದೆ ಉಳಿದವರನ್ನ ನೋಡಿ, "ಏನೋ ಅಷ್ಟು ಬೇಗ ಸುಸ್ತಾಯ್ತೇನೋ " ಅಂತ ತಮಗಾದ ಸುಸ್ತನ್ನೂ ತೋರಿಸಿಕೊಳ್ಳದೆ ಕೇಳೋದು.. ಆಗ ಏನೋ ಒಂತರಾ ಖುಷಿ ಅನ್ನಿಸ್ತಿತ್ತು. ಮೊದಲ ದಿನ ಮೈಕೈ ಎಲ್ಲಾ ನೋಯುತ್ತಿದ್ರೂ ಯಾರೂ ಬೇಜಾರು ಮಾಡ್ಕೊಂಡಿರ್ಲಿಲ್ಲ.. ಹಾಗೇ ಸಲ್ಪ ದಿನ ಹೀಗೇ ಮುಂದುವರೆಯಿತು...

ನಾವು ಜಾಗಿಂಗ್ ಹೊರಟಾಗ ಪಕ್ಕದ ರೂಮಿನವರೆಲ್ಲಾ ಮಲಗಿದ್ದನ್ನು ಕಂಡು, ಏನು ಸೋಮಾರಿಗಳಪ್ಪಾ... ಅಂತ ಬೈದುಕೊಂಡು , ಅವರ ರೂಮ್ ಎದ್ರುಗಡೆ ಬೂಟು ಕಾಲಲ್ಲಿ ಸಲ್ಪ ಶಬ್ದ ಮಾಡಿ ಹೋಗುತ್ತಿದ್ದೆವು... :P

ಹಾಗೇ ಒಂದು ದಿನ ಜಾಗಿಂಗ್ ಹೋಗೋ ಸಮಯಕ್ಕೆ ಮಳೆ ಬಂತು, ಸರಿ ಇವತ್ತು ಬೇಡ ಅಂದುಕೊಂಡು ಮತ್ತೆ ಮಲಗಿದೆವು. ಮರುದಿನ ಅಲಾರ್ಮ್ ಹೊಡೆದಾಗ "ದೇವ್ರೇ ಮಳೆ ಬರ್ತಿರ್ಲಿ" ಅಂತ ಅಂದುಕೊಳ್ಳುತ್ತಾ ನಿಧಾನವಾಗಿ ಎದ್ದು ಹೊರಗಡೆ ಹೋಗಿ ನೋಡೋದು, ಕಣ್ಣಿಗೆ ಕಾಣದಂಗೆ ಮಳೆ ಎಲ್ಲಾದ್ರೂ ಬರ್ತಿದ್ರೆ ಅಂತ ಕೈ ಹೊರಗೆ ಚಾಚಿ ಟೆಸ್ಟ್ ಮಾಡೋದು... ಎಲ್ಲರ ಮನಸಲ್ಲೂ ಇದೇ ಭಾವನೆ ಇದ್ರೂ ಬೇರೆಯವರ ಮುಂದೆ ಒಪ್ಪಿಕೊಳ್ಳಲು ತಯಾರಿರ್ಲಿಲ್ಲ. ತನ್ನಿಂದಾಗಿ ಜಾಗಿಂಗ್ ನಿಲ್ಸಿದ್ವಿ ಅಂತ ಆಗ್ಬಾರ್ದು ಅಂತ ಎಲ್ಲರ ಮನಸಲ್ಲಿ... ಹೀಗೇ ಒಲ್ಲದ ಮನಸ್ಸಿನ ಜಾಗಿಂಗ್ ಒಂದೆರಡು ದಿನ ಮುಂದುವರೆಯಿತು. ಆಮೇಲಾಮೇಲೆ ಒಂದೊಂದಾಗಿ ಕಾರಣ ಗಳನ್ನ ಹುಡುಕೋದಕ್ಕೆ ಶುರು ಮಾಡಿದ್ವಿ...

ಕೆಲವೊಂದ್ಸಲ ಬೇರೆಯವರನ್ನ ಬೈದುಕೊಳ್ಳಲು ಚೆನ್ನಾಗಿರುತ್ತೆ ಅಂತ ಒಬ್ಬೊಬ್ಬರೇ ಜಾಗಿಂಗ್ ಹೋಗಿ ಬಂದದ್ದೂ ಇದೆ... ಆದರೆ ತಾನೊಬ್ಬನೇ ನಿದ್ರೆ ಬಿಟ್ಟು ಬೇಗ ಎದ್ದು ಏನಕ್ಕೆ ಓಡ್ಬೇಕು ಅನ್ನಿಸೋಕೆ ಶುರು ಆಗುತ್ತೆ. ಕಾರಣ ಕೊಡೋದಿಕ್ಕಾಗುತ್ತೆ ಅಂತ ಏನೂ ಕೆಲಸ ಇಲ್ಲದಿದ್ರೂ ರಾತ್ರಿ ಮಲಗೋದು ಲೇಟ್ ಆಗೋದಕ್ಕೆ ಶುರು ಆಯ್ತು...

ಕಾರಣಗಳ ಕೆಲವು ಸ್ಯಾಂಪಲ್ಸ್

"ಮಗಾ ನಿನ್ನೆ ಮಲ್ಗಿದ್ದು ಲೇಟ್ ಆಗಿತ್ತೋ.. "

"ಇವತ್ತು ಬೇಗ ಕಾಲೇಜ್ಗೆ ಹೋಗ್ಬೇಕು ಕಣೋ"

"ನಾನು ಇವತ್ತು ರೂಮಲ್ಲೇ ವ್ಯಾಯಾಮ ಮಾಡ್ತೀನಿ"

"ಮಳೆಗಾಲ ಮುಗೀಲಿ ಕಣೋ, ಮತ್ತೆ ಹೋಗೋಣ"

"ಅವ್ನೂ ಊರಿಗೆ ಹೋಗಿದಾನಲ್ಲೋ, ವಾಪಸ್ ಬಂದ್ಮೇಲಿಂದ ಶುರು ಮಾಡಣ"

"ಲಾಲ್ ಬಾಗ್ ವರ್ಗೂ ಬೇಡ ಇಲ್ಲೇ ಒಂದು ರೌಂಡ್ ಹೋಗಿ ಬರೋಣ"

"ನಿನ್ನೆ ವ್ಯಾಯಾಮ ಮಾಡಿದ್ದು, ಸುಸ್ತಾಗಿದೆ ಕಣೋ"

ಎಲ್ಲರ ಮನಸಲ್ಲೂ ಇದೇ ಇದ್ದುದರಿಂದ , ಜಾಸ್ತಿ ಕಾರಣಗಳನ್ನು ಹೇಳಿದವರಿಂದಾಗೇ ಜಾಗಿಂಗ್ ಹೋಗೋದು ನಿಲ್ಲಿಸಿದೆವು ಅಂತ ಹೇಳಿಕೊಳ್ಳುತ್ತಾ ನಮ್ಮ ಮನಸಿಗೆ ಸಮಾಧಾನ ತಂದುಕೊಂಡು ಮುಂಜಾನೆಯ ಸವಿ ನಿದ್ರೆಯನ್ನು ಸವಿದೆವು :)

Comments !