ARAVINDA VISHWANATHAPURA

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಕಾರ್ಯಕ್ರಮ

Jan 24, 2012
1 minute read.
ಹೆಜ್ಜೆ ಕನ್ನಡ ಕಾರ್ಯಕ್ರಮ kannadablog

ಹಿಂದಿನ ಬ್ಲಾಗ್ ನಲ್ಲಿ "ಹೆಜ್ಜೆ" ಕಾರ್ಯಕ್ರಮದ ಬಗ್ಗೆ ಹೇಳಿದ್ದೆ. ಕ್ಷಣಗಣನೆ ಮುಗಿದು ಆ ದಿನ ಬಂದೇ ಬಿಟ್ಟಿತು. ಕಾರ್ಯಕ್ರಮ ಬಹಳ ಸುಂದರವಾಗಿ ಆಯಿತು, ಕಾರ್ಯಕ್ರಮದ ವರದಿಯಂತಲ್ಲದಿದ್ದರೂ ಅದರ ಬಗ್ಗೆ ಒಂದಿಷ್ಟು ಬರೆಯೋಣವೆನಿಸಿತು.

\------------

ಪವಿತ್ರ_ ಹಾಗೂ ಓಂ ಶಿವಪ್ರಕಾಶ್ ರವರು ಸಂಚಯ ಮತ್ತು ಹೆಜ್ಜೆಯ ಬಗ್ಗೆ ಹೇಳುತ್ತ ಕಾರ್ಯಕ್ರಮ ಪ್ರಾರಂಭಿಸಿದರು.

\------------

ಕೆಲವು ಮಾಹಿತಿಗಳು ಎಲ್ಲರಿಗೂ ಸಿಗದೆ ಹಾಗೇ ನಶಿಸಿ ಹೋಗುವ ಹಾಗೂ ನಮ್ಮ ಬಳಿಯೇ ಇದ್ದುದನ್ನು ಮರೆಯುವ ಪರಿಯನ್ನು ನಾಗೇಶ್ ಹೆಗಡೆಯವರು ಅಜ್ಜಿಯ ಕತೆ ಮೂಲಕ ಬಹಳ ಚೆನ್ನಾಗಿ ವಿವರಿಸಿದರು.

\------------

"ಹೆಜ್ಜೆ" ಕಾರ್ಯಕ್ರಮಕ್ಕೆ ವಸುದೇಂದ್ರ ಬಂದಾಗ ಮಾತನಾಡಿಸಬೇಕು, ಅವರ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಅಂತ ತುಂಬಾ ಪ್ಲಾನ್ ಮಾಡಿಕೊಂಡಿದ್ದೆ. ಅವರು ಸಲ್ಪ ಹೊತ್ತಿನಲ್ಲೇ ಹೊರಟಿದ್ದುದರಿಂದ ಒಂದು ಕನಸು ಕನಸಾಗಿಯೇ ಉಳಿಯುತು :(

ವಸುದೇಂದ್ರರವರು ಒಂಟಿ ಚಪ್ಪಲಿಯ ಕತೆಯ ಜೊತೆ ಹೇಳಿದ "ಹುಸಿ ಬಾವುಕತೆ" ವಿಚಾರ ತುಂಬಾ ಚೆನ್ನಾಗಿತ್ತು. ನಾನೂ ಎಷ್ಟೋ ಬಾರಿ ಯಾವುದ್ಯಾವುದೋ ವಿಚಾರಕ್ಕೆ ಸುಮ್ಮನೆ ಯೋಚಿಸುತ್ತಾ ಕೂರುತ್ತಿದ್ದುದು ನೆನಪಾಯಿತು.

\------------

DTP ಹಾಗೂ ಫಾಂಟ್ ಗಳಲ್ಲಿ ಏನು ತೊಂದರೆಗಳಿವೆ, ಯುನಿಕೋಡ್ ಗೆ ಹೋಗಲು ಇರುವ ಕಷ್ಟಗಳನ್ನು ಬೇಲೂರು ಸುದರ್ಶನ್ ರವರು ಹಂಚಿಕೊಂಡರು.

\------------

ಕಾರ್ಯಕ್ರಮದಲ್ಲಿ ವಿವಿಧ ವಿಚಾರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಬಹಳ ಹೊಸ ಗೆಳೆಯರು ಸಿಕ್ಕರು, ಫಾಂಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಹಾಗೂ ಫಾಂಟ್ ಮಾಡಲು ತುಂಬಾ ಜನ ಉತ್ಸಾಹಿಗಳು ಸಿಕ್ಕಿದರು. ಕನ್ನಡಕ್ಕೆ ಫಾಂಟ್ ಗಳನ್ನು ಮಾಡುವ ಕೆಲಸಕ್ಕೆ ಮತ್ತಷ್ಟು ಹುರುಪು ಸಿಕ್ಕಂತಾಯಿತು.

\------------

ಮೈಸೂರಿನಿಂದ ಗೆಳೆಯ ಪವನ್ ಭೇಟಿ ಮಾಡಿ ಬಹಳ ದಿನ ಆಗಿತ್ತು, "ಹೆಜ್ಜೆ" ಯ ಸಲುವಾಗಿ ಬಂದದ್ದು ಬಹಳ ಸಂತಸವಾಯಿತು. :)

\------------

e-speak(Text to speech) ತಂತ್ರಾಂಶದಲ್ಲಿ ಕನ್ನಡವನ್ನು ಅಳವಡಿಸಿದ ಶ್ರೀಧರ್ ಟಿ ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಬಹಳ ಸಂತೋಷವಾಯಿತು, ನಮ್ಮೆಲ್ಲರಿಗೂ ಇನ್ನೂ ಹೆಚ್ಚಿನ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಹುರುಪು ಸಿಕ್ಕಿತು.

\------------

ವಿವೇಕ್ ಶಂಕರ್ ಕನ್ನಡ ವಿಕ್ಷನರಿ ಬಗ್ಗೆ ಹೇಳುತ್ತಿದ್ದಾಗ, ಅವರಲ್ಲಿದ್ದ ಉತ್ಸಾಹ ನೋಡಿ ಈ ಯೋಜನೆಗಳಿಗೆ ನಾನೂ ಕೈಜೋಡಿಸಬೇಕೆನಿಸಿತು, ಪದಗಳಿಗೆ ಅರ್ಥ ಸೇರಿಸುವುದು ಸಾಧ್ಯವಾಗದಿದ್ದರೂ ಈಗಿರುವ ತಾಂತ್ರಿಕ ತೊಂದರೆಗಳು ಹಾಗೂ ಇಂಟರ್ನೆಟ್ ಇಲ್ಲದಿದ್ದಾಗ ವಿಕ್ಷನರಿ ಬಳಸಲು ಸಾಧ್ಯವಾಗಿಸುವ ಬಗ್ಗೆ ಏನಾದರೂ ಮಾಡಬೇಕು ಅನ್ನಿಸಿತು.

\------------

ನನ್ನಿ ಸುನೀಲ iPhone/Apple development ನ ಅನುಭವವನ್ನು ಹಂಚಿಕೊಂಡರು. ನನ್ನಿ ಎಂದರೆ ಏನು ಎಂದು ಬಹಳ ಜನರಿಗೆ ಪ್ರಶ್ನೆ ಇದ್ದುದರಿಂದ ಅದೊಂದು ದೊಡ್ಡ ಕತೆ ಎಂದು ಸಣ್ಣದಾಗಿ ಹೇಳಿ ಅನುಮಾನ ಬಗೆಹರಿಸಿದರು. :)

\------------

ಶಶಿಶೇಖರ್ ಮೊದಲಿನಿಂದಲೂ ನನಗೆ ಬಹಳಷ್ಟು ಮುಕ್ತ ತಂತ್ರಾಂಶ ಚಟುವಟಿಕೆಗಳನ್ನು ಮಾಡಲು ಸ್ಪೂರ್ತಿ, ಅವರೂ ತಮ್ಮ ಅನುಭವಗಳನ್ನು ಹಂಚಿಕೊಂಡರು, ಈಗಿರುವ ಕೆಲವು ಕನ್ನಡ ತಂತ್ರಾಂಶಗಳ ಸ್ಥಿತಿ ಹಾಗೂ ಸಮುದಾಯಗಳ ಬಗ್ಗೆ ಮಾತನಾಡಿ ಮುಂದೆ ಏನು/ಹೇಗೆ ಮಾಡಬಹುದು ಎಂದು ಸಲಹೆಗಳನ್ನು ಕೊಟ್ಟರು.

\------------

ಶಂಕರ್ ಪ್ರಸಾದ್ translation ಮತ್ತು ಲೋಕಲೈಸೇಷನ್ ಬಗ್ಗೆ ಹೇಳಿದರೆ, ವಾಸುದೇವ್ ತನ್ನ ಡೆಬಿಯನ್ maintainer ಆಗುವ ಕನಸು ಈಡೇರಿದ ಕತೆ ಹಾಗೂ ತಾನು ಮಾಡಿದ dictionary bot. ಇದನ್ನು ಗೂಗಲ್ ಟಾಕ್ ನ ಜೊತೆ ಬಳಸುವುದರ ವಿವರ ಅವನ ಬ್ಲಾಗ್ ೧ ಮತ್ತು ಬ್ಲಾಗ್ ೨ ನಲ್ಲಿಯೇ ಓದಬಹುದು.

\------------

ತಂತ್ರಜ್ಞಾನದಲ್ಲಿ ಮಹಿಳೆಯರು ಭಾಗವಹಿಸುವುದು ಏಕೆ ಕಡಿಮೆ ಎಂದು ಸವಿತ ತಮ್ಮ ಅನುಭವಗಳನ್ನು ಹಂಚಿಕೊಂಡರು.

\------------

ಬ್ಲಾಗ್ ಅಥವಾ ಯಾವುದೇ ಅಂತರ್ಜಾಲ ಪುಟದಲ್ಲಿ ಇರುವ ಬರಹಗಳಿಗೆ ತಮ್ಮದೇ ಆದ ನಿರೂಪಣೆ ಕೊಡಬಹುದು ಹಾಗೂ ಒಂದೇ ವಿಷಯಕ್ಕೆ ಹಲವಾರು ಜನ ಬರೆದ ನಿರೂಪಣೆಯನ್ನು ಹಂಚಿಕೊಳ್ಳಬಹುದು ಎಂದು ದಿನೇಶ್ ಅವರ ಹೊಸ ಯೋಜನೆ ಅಲಿಪಿ ಯೊಂದಿಗೆ ತೋರಿಸಿಕೊಟ್ಟರು.

\------------

ಆನ್ ಲೈನ್ ಪದಬಂದ ಮಾಡಿದ ರುದ್ರೇಶ್ ರವರು ಹಾಗೂ Android ಗೆ ಕೀಬೋರ್ಡ್ ಮಾಡಿದ ಶ್ರೀಧರ್ ತಮ್ಮ ಯೋಜನೆಗಳು ಈಗಿರುವ ಸ್ಥಿತಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿದರು.

\------------

ವಸಂತ್ ಕಜೆ ನಿಸರ್ಗದಲ್ಲಿರುವ ಕೆಲವು ತಂತ್ರಜ್ಞಾನದ ಬಗ್ಗೆ ಫೋಟೋ ಸಹಿತವಾಗಿ ವಿವರಿಸಿದರು, ಪ್ರಕೃತಿಯಲ್ಲಿ ಇರುವ ವಿಸ್ಮಯವನ್ನೇ ನಾವು ಕೃತಕವಾಗಿ ಮಾಡಲು ಹೊರಟಾಗ ಆಗುವ ಪ್ರಕೃತಿ ನಾಶದ ಬಗ್ಗೆ ವಿವರಿಸಿದರು. ವಸಂತ್ ಹೇಳಿದ ಅಂಜೂರದ ಕತೆಯಂತೂ ಅದ್ಭುತವೆನಿಸಿತು. (ಆ ಕತೆಯನ್ನು ಅವರ ಬ್ಲಾಗ್ ನಲ್ಲಿಯೂ ಓದಬಹುದು). ಅವರ ಮಾತುಗಳಿಗೆ ಬೆಂಬಲವೆಂಬಂತೆ ಮಾತನಾಡಿದ ಮುರಳಿ ನಗರಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಎಲ್ಲರೂ ಸೈಕಲ್ ಬಳಸಿ ಎಂದರು.

\------------

ಈ ಕಾರ್ಯಕ್ರಮದಲ್ಲಿ ನಾನು ಫಾಂಟ್ಸ್ ಕೆಲಸ ಮಾಡುವ ಬಗ್ಗೆ ಹಾಗೂ ಫಾಂಟ್ಸ್ ಮಾಡುವುದರ ಬಗ್ಗೆ ಸರಳವಾಗಿ ಹೇಳುವ ಪ್ರಯತ್ನ ಪಟ್ಟೆ. ಅದರ slides ಇಲ್ಲಿವೆ.

ಈ presentation ಅನ್ನು LaTeX/XeLaTeX ಉಪಯೋಗಿಸಿ ಮಾಡಿದ್ದು. ಅದಕ್ಕೆ ಬೇಕಾದ ಚಿತ್ರಗಳನ್ನು ಬರೆದಿದ್ದು MyPaint ಮತ್ತು Inkscape ಎಂಬ ತಂತ್ರಾಂಶಗಳನ್ನು ಬಳಸಿ. ಹಿನ್ನಲೆ ಚಿತ್ರ ನಾನು ಒಮ್ಮೆ ಬೇಲೂರಿಗೆ ಹೋದಾಗ ಅಲ್ಲೊಂದು ಕಡೆ ತೆಗೆದಿದ್ದು. ಇದರ ಸೋರ್ಸ್ ಇಲ್ಲಿ ಲಭ್ಯವಿದೆ.

\------------

ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in