ಗೋವು ಮತ್ತು ನಾನು

ಸಂಜೆ ಇಷ್ಟೊತ್ತಾಯ್ತು ದನ ಇನ್ನೂ ಮನೆಗೆ ಬಂದಿಲ್ಲ ಅಂತ ಅಮ್ಮ ಹೇಳಿದಾಗ, ಮೇಯಲು ಹೋಗಿದ್ದು ಎಲ್ಲಿ ಹೋಯ್ತೇನೋ ಅಂತ ಎಲ್ಲಾ ಕಡೆ ಹುಡುಕಿ ಕರೆದುಕೊಂಡು ಬಂದಿದ್ದು ಈಗಲೂ ನೆನಪಿದೆ. ದನ ಕರುಗಳನ್ನು ಮನೆಯ ಸದಸ್ಯರಂತೆಯೇ ನೋಡ್ತಿದ್ವಿ.

ಬೆಳಗ್ಗೆ ಮೇಯಲು ಬಿಟ್ಟರೆ ಸಂಜೆ ಮನೆಗೆ ಬರ್ತಾವೆ ಅಂದರೆ, ಬೆಂಗಳೂರಿನಿಂದ ಬಂದ ಗೆಳೆಯರಿಗೆ ಆಶ್ಚರ್ಯ! "ಬೇರೆ ಎಲ್ಲೂ ಹೋಗಲ್ವಾ ಮನೇಗೇ ಬರ್ತಾವಾ?" ಅಂತ..

ಸಣ್ಣ ಕರುಗಳನ್ನು ಕಟ್ಟುತ್ತಿರಲಿಲ್ಲ, ಕೊಟ್ಟಿಗೆಗೆ ಹೋಗಿ ಮನೆಗೆ ಬರುವಾಗ ನಮ್ಮ ಹಿಂದೆಯೇ ಕುಣಿಯುತ್ತಾ ಬಂದು ಬಿಡುತ್ತಿದ್ವು ಕರುಗಳು. ಅವುಗಳ ಕುಣಿತ ನಮಗೂ ಖುಷಿ.

ಹಾಲು ಕರೆಯುವಾಗ ಸಣ್ಣ ಕರುಗಳಿಗೆ ಮೊದಲ ಆಧ್ಯತೆ. ಹಾಲು ಕುಡಿದ ಬಳಿಕ ನಮ್ಮ ಜೊತೆ ಅವುಗಳ ಆಟ(ಅಥವಾ ಅವುಗಳ ಜೊತೆ ನಮ್ಮ ಆಟ)

ಕರು

ಕರುಗಳು ಸಲ್ಪ ದೊಡ್ಡದಾಗುವ ತನಕ ತೋಟದಲ್ಲೇ ಮೇಯಲು ಬಿಟ್ಟು, ನಂತರ ದನಗಳ ಜೊತೆ ಹೊರಗಡೆ ಮೇಯಲು ಬಿಡುತ್ತಿದ್ದೆವು.

ಕರು ಹಾಕುವ ಸಮಯದಲ್ಲಿ ನಾನು ಊರಲ್ಲಿ ಇದ್ದುದು ಕಡಿಮೆ, ಅಮ್ಮ ಫೋನಿನಲ್ಲಿ ಕರು ಹಾಕಿದ ವಿಷಯ ಕೇಳಿ ಖುಷಿ ಪಡ್ತಾ ಇದ್ವಿ. ಅವತ್ತೊಂದಿನ ಊರಲ್ಲೇ ಇದ್ದೆ. ಅಮ್ಮ-ಅಪ್ಪ ಅವಾಗವಾಗ ಕೊಟ್ಟಿಗೆಗೆ ಹೋಗಿ ನೋಡಿಕೊಂಡು ಬರುತ್ತಿದ್ದರು, "ಭದ್ರೆ ಇವತ್ತು ಕರು ಹಾಕ್ಬೋದೇನೋ ಬಹಳ ಸುಸ್ತಾದಂಗೆ ಕಾಣುತ್ತೆ" ಅಂತಿದ್ಲು ಅಮ್ಮ. ರಾತ್ರಿಯೂ ಕೂಡ ಒಂದೊಂದು ಘಂಟೆಗೂ ಕೂಡ ಅಲಾರ್ಮ್ ಇಟ್ಕೊಂಡು ನೋಡಿಕೊಂಡು ಬರ್ತಿದ್ರು. ನಮ್ಮೆಲ್ಲರಂತೆ ಅವೂ ಇದ್ದವು. ಕರು ಹಾಕಿದ ನಂತರ ಬಾಣಂತಿ ಆರೈಕೆ, ಗಂಜಿ, ಖಾರ ಇತ್ಯಾದಿ.

ಮಕ್ಕಳು ಹಟ ಮಾಡಿದರೆ, ಕೊಟ್ಟಿಗೆಗೆ ಕರೆದುಕೊಂಡು ಹೋಗಿ ದನಕರುಗಳನ್ನು ಮಾತಾಡಿಸಿದರೆ ಹಟವೆಲ್ಲಾ ಮಾಯ :)

ಮನೆಯ ನಾಯಿ ಮತ್ತೆ ದನಗಳಿಗೆ ಒಳ್ಳೆ ಜೋಡಿ, ನಾಯಿಗೂ ಗೊತ್ತಾಗಿಬಿಟ್ಟಿತ್ತು ಇದು ಮನೆಯ ಸದಸ್ಯ ಅಂತ, ಬೇರೆ ದನಗಳು ಗೇಟಿನ ಬಳಿ ಬಂದರೆ ಜೋರು ಮಾಡಿ ಓಡಿಸುತ್ತಿತ್ತು, ಮನೆಯ ದನಗಳಿಗೆ ಸುಮ್ಮನಿರುತ್ತಿತ್ತು..

ಒಮ್ಮೆ ಭದ್ರೆ ಮನೆಗೆ ಬಂದಿರಲಿಲ್ಲ, ಎಲ್ಲಿ ಹುಡುಕಿದರೂ ಸಿಕ್ಕಿರಲಿಲ್ಲ. ಕೊನೆಗೆ ಊರಿನವರು ಒಬ್ಬರು ಮನೆಗೆ ಬಂದು ಹೇಳಿದರು, ಆ ಫೀಲ್ಡ್ ಹತ್ರ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದೆ ಅಂತ. ಆಮೇಲೆ ಆಟೋದಲ್ಲಿ ಕರೆದುಕೊಂಡು ಬಂದ್ವಿ, ಎಷ್ಟು ಆರೈಕೆ ಮಾಡಿದರೂ ಉಳಿಸಿಕೊಳ್ಳಲು ಆಗಲಿಲ್ಲ. ಆಗ ಆದ ಬೇಸರ ಅಷ್ಟಿಷ್ಟಲ್ಲ..

ಮುಂಚೆ ಬರೆದ ಬ್ಲಾಗ್ "ಗುಟ್ಟು"

***

ಈಗಿನ ಎಷ್ಟೋ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತೆ ಅಂತ ಕೇಳಿದ್ರೆ ಅಂಗಡಿಯಿಂದ ಎನ್ನುತ್ತಾರೆ ಹೊರತು ಅದರಾಚೆ ಗೊತ್ತಿಲ್ಲ. ದನ-ಕರುಗಳ ಬಗ್ಗೆ ಭಾವನಾತ್ಮಕ ಸಂಭಂದ ಇಲ್ಲ. ಅದೊಂದೇ ಅಲ್ಲ, ಪ್ರಕೃತಿಯ ಜೊತೆ ನಂಟೇ ಇಲ್ಲ, ಆಧುನಿಕತೆಯಿಂದಾಗಿ ಬದುಕು ಯಾಂತ್ರಿಕವಾಗಿ ಬಿಟ್ಟಿದೆ. ಪ್ರತಿಯೊಂದು ವಿಷಯದಲ್ಲೂ ಲಾಭದ ಯೋಚನೆಯೇ ಆಗಿದೆ :(

***

ಆಹಾರ ಸರಪಳಿ, ತಿನ್ನುವವರ ಆಯ್ಕೆ ಅಂತೆಲ್ಲಾ ವಾದಗಳಿರಬಹುದು.. ಏನೇ ವಾದಗಳಿದ್ದರೂ ನಮ್ಮ ಮನೆಯ ದನ-ಕರುಗಳನ್ನು ಮುದಿಯಾಯ್ತು ಅಂತ ಮಾರುವುದಿಲ್ಲ. ಅದನ್ನು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಇದು ನನ್ನ ಆಯ್ಕೆ.

ವಿ.ಸೂ: ನಾನು ಸಸ್ಯಾಹಾರಿ, ಇನ್ನು ಮುಂದೆಯೂ ಹೀಗೇ ಇರಲು ಬಯಸುತ್ತೇನೆ.

Comments !