ARAVINDA VISHWANATHAPURA

ಕಂಪ್ಯೂಟರ್ ಬರವಣಿಗೆ - ಅಂದ ಚೆಂದ

Nov 26, 2011
1 minute read.
ಲೇಖನ kannadablog
ಇದು "ಕಹಳೆ"ಯಲ್ಲಿ ಪ್ರಕಟವಾದ ಲೇಖನ. ಇಲ್ಲಿ ನೋಡಿ.

ನಾವು ಕೈಯಲ್ಲಿ ಎಲ್ಲಿ ಬರೀತೀವಿ, ಕಂಪ್ಯೂಟರ್ ನಲ್ಲಿ ಟೈಪ್ ಮಾಡಿದ್ರೆ ಸಾಕು ಚೆನ್ನಾಗಿಯೇ ಬರುತ್ತಲ್ಲ…​ ಇದೇನು ಹೊಸ ವಿಷಯ ಅಂದುಕೊಂಡಿರಾ? ನಾವು ಟೈಪ್ ಮಾಡಿದ್ದು ಬರುತ್ತೆ ಎನ್ನುವುದು ನಿಜವಾದರೂ ಚೆನ್ನಾಗಿ ಕಾಣಿಸಲು ಅಕ್ಷರಗಳೊಂದೇ ಮುಖ್ಯ ಅಲ್ಲ ಎಂದು ಕೂಡಾ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಯಾವುದನ್ನು ಕೂಡ ಹೀಗೇ ಬಳಸಬೇಕು ಅಂತ ಹೇಳಲಾಗುವುದಿಲ್ಲ, ಕೆಲವರಿಗೆ ಒಂದು ತರಹದ್ದು ಇಷ್ಟವಾದರೆ ಇನ್ನು ಕೆಲವರಿಗೆ ಇನ್ನೊಂದಷ್ಟು.

ಸುತ್ತಲ ಜಾಗ

ಇಕ್ಕಟ್ಟಾಗಿ ಇರುವುದು ಯಾರಿಗೂ ಇಷ್ಟ ಇಲ್ಲ, ಹಾಗಿದ್ದಲ್ಲಿ ನಮ್ಮ ಬರಹಗಳೇಕೆ ಒತ್ತೊತ್ತಾಗಿ ಇರಬೇಕು? ಸುತ್ತಲೂ ಜಾಗ ಸರಿಯಾಗಿ ಬಿಡದಿದ್ದರೆ ಓದಲಿಕ್ಕೇನೂ ಕಷ್ಟವಾಗದಿದ್ದರೂ ನೋಡಲಿಕ್ಕೆ ಚೆನ್ನಾಗಿ ಕಾಣಿಸುವುದಿಲ್ಲ. ಕೆಳಗಿನ ಚಿತ್ರಗಳಲ್ಲಿ ಯಾವ ಬಾಕ್ಸ್ ನಲ್ಲಿ ಬರೆದಿದ್ದು ಚೆನ್ನಾಗಿ ಕಾಣಿಸುತ್ತಿದೆ? ಸುತ್ತಲ ಜಾಗ ವಿಶಾಲವಾಗಿದ್ದಷ್ಟೂ ಚೆನ್ನಾಗಿ ಕಾಣಿಸುತ್ತದೆ.

Padding

ಸಾಲುಗಳ ಉದ್ದ

ಕೆಲವು ಅಂತರ್ಜಾಲ ಪುಟಗಳಲ್ಲಿ ಕಂಪ್ಯೂಟರ್ ಪರದೆ ಅಗಲವಾಗಿ ಇದ್ದಷ್ಟೂ ಜಾಗಕ್ಕೆ ಲೇಖನವನ್ನು ಹಾಕಿರುತ್ತಾರೆ, ಆದರೆ ಬಹಳಷ್ಟು ಅಧ್ಯಯನಗಳ ಪ್ರಕಾರ ಸಾಲುಗಳು ಬಹಳಷ್ಟು ಉದ್ದವಿದ್ದಷ್ಟೂ ಓದಲು ಹೆಚ್ಚು ಕಷ್ಟವಂತೆ. ಉದ್ದ ಸಾಲುಗಳು ಓದುವಾಗ ಕುತ್ತಿಗೆಯನ್ನು ಹೆಚ್ಚು ಹೆಚ್ಚು ತಿರುಗಿಸಬೇಕಾಗುತ್ತದೆ ಹಾಗೂ ಓದುತ್ತಿರುವ ಲೈನ್ ತಪ್ಪಿ ಹೋಗುತ್ತಿರುತ್ತದೆ. ಪ್ರೋಗ್ರಾಮಿಂಗ್ ಮಾಡುವವರೂ ಕೂಡ ಎಷ್ಟೇ ಅಗಲದ ಮಾನಿಟರ್ ಇದ್ದರೂ ಓದಲು ಸುಲಭವಾಗುತ್ತದೆಂದು ತಮ್ಮ ಪ್ರೋಗ್ರಾಮ್ ನ ಸಾಲುಗಳನ್ನು ಮೊಟಕುಗೊಳಿಸಿರುತ್ತಾರೆ.

ಅಕ್ಷರಗಳ ಎತ್ತರ

ಬಹಳಷ್ಟು ಹುಡುಕಿ ಕೊನೆಗೊಂದು Wordpress/Drupal/Blogspot ಗೆ ಒಂದು ಚೆಂದದ theme ಹುಡುಕಿಕೊಂಡಿರುತ್ತೀವಿ, ಅದು ಚೆನ್ನಾಗಿಯೇ ಕಾಣಿಸುತ್ತಿರುತ್ತದೆ ಆದರೆ ನಮ್ಮ ಅಂತರ್ಜಾಲ ಪುಟಕ್ಕೆ ಹಾಕಿದ ನಂತರ ಚೆನ್ನಾಗಿ ಕಾಣಿಸ್ತಿರೋಲ್ಲ. ಇದಕ್ಕೆ ಎರಡು ಕಾರಣಗಳಿವೆ; ಮೊದಲನೆಯದು ಅಕ್ಷರಗಳ ಎತ್ತರ ಮತ್ತೊಂದು ಸಾಲುಗಳ ಮಧ್ಯದ ಜಾಗ. ಕೆಳಗಿನ ಚಿತ್ರ ನೋಡಿ, ಕನ್ನಡದ ಅಕ್ಷರದ ಎತ್ತರಕ್ಕೂ ಇಂಗ್ಲಿಷ್ ಅಕ್ಷರಗಳ ಎತ್ತರವನ್ನೂ ಹೋಲಿಕೆ ಮಾಡಿ ನೋಡಿ. ಕನ್ನಡದ ಅಕ್ಷರಗಳು ಇಂಗ್ಲಿಷ್ ನ ಸಣ್ಣ ಅಕ್ಷರಗಳ ಎತ್ತರದಷ್ಟಿದೆ, ಹಾಗಾಗಿ ಸಣ್ಣಗೆ ಕಾಣಿಸುತ್ತಿವೆ, ಇದು ಫಾಂಟ್ ತಯಾರಕರ ತೊಂದರೆ ಇದ್ದರೂ ಇರಬಹುದು. ಆ ಥೀಮ್ ಅನ್ನು ಕನ್ನಡದ ಅಕ್ಷರಗಳಿಗೆ ಮಾಡಿದ್ದಲ್ಲವಾದುದರಿಂದ ಅಕ್ಷರಗಳು ಓದಲು ತುಂಬಾ ಸಣ್ಣವಾಗಿ ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಥೀಮ್ ನಲ್ಲಿ ಈ ತೊಂದರೆ ಇದ್ದರೆ ಅಕ್ಷರಗಳ ಎತ್ತರವನ್ನು ಒಂದೆರಡು ಪಾಯಿಂಟ್ ಜಾಸ್ತಿ ಮಾಡಿ ನೋಡಿ.

Font Size

ಕೆಲವೊಂದು ಕಡೆ ಬಹಳ ದೊಡ್ಡ ದೊಡ್ಡ ಅಕ್ಷರಗಳನ್ನೇ ಬಳಸಿರುತ್ತಾರೆ ಲೇಖನಗಳಲ್ಲಿ, ಹಾಗೆ ಬಳಸಿದಾಗ heading ಯಾವುದು, ಲೇಖನ ಯಾವುದು ಎಂದು ತಿಳಿಯುವುದಿಲ್ಲ. ಲೇಖನಕ್ಕೆ ದೊಡ್ಡ ಅಕ್ಷರಗಳು ಬೇಕಿದ್ದಲ್ಲಿ heading ಗೆ ಇನ್ನೂ ದೊಡ್ಡ ಅಕ್ಷರಗಳನ್ನು ಬಳಸಿ.

ಸಾಲುಗಳ ಮಧ್ಯದ ಜಾಗ

ಸುತ್ತಲೂ ಬಿಡುವ ಜಾಗ ಎಷ್ಟು ಮುಖ್ಯವೋ ಹಾಗೆಯೇ ಎರಡು ಸಾಲುಗಳ ಮಧ್ಯೆ ಬಿಡುವ ಜಾಗಕ್ಕೂ ಮಹತ್ವವಿದೆ. ಇಂಗ್ಲಿಷ್ ಬರಹಗಳಲ್ಲಿ ಒತ್ತಕ್ಷರಗಳು ಇಲ್ಲವಾದ್ದರಿಂದ ಸಾಲಿನ ಕೆಳಗಡೆ ಬರವಣಿಗೆಗಳು ಬರಲ್ಲ, ಹಾಗಾಗಿ ಎರಡು ಸಾಲುಗಳ ಮಧ್ಯೆ ಜಾಗ ಕಡಿಮೆ ಇದ್ದರೂ ಚೆನ್ನಾಗಿಯೇ ಕಾಣುತ್ತದೆ. ಕೆಳಗಿನ ಚಿತ್ರದಲ್ಲಿರುವ ಉದಾಹರಣೆ ನೋಡಿ, ಇಂಗ್ಲಿಷ್ ಬರಹದಲ್ಲಿ ಬಳಸಿದಷ್ಟೇ ಜಾಗವನ್ನು ಕನ್ನಡಕ್ಕೆ ಬಳಸಿದಾಗ ಸಾಲುಗಳು ಇಕ್ಕಟ್ಟಾಗುತ್ತವೆ.

Line Height

ಬಣ್ಣಗಳ ಆಯ್ಕೆ

ಕೆಲವರ ಲೇಖನಗಳಲ್ಲಿ ಅವರಿಗೆ ಇಷ್ಟವಾದ ಬಣ್ಣಗಳನ್ನೆಲ್ಲಾ ಬಳಸಿರುತ್ತಾರೆ! ನಮಗೆ ಬೇಕಾದಂತೆ ಬಣ್ಣಗಳನ್ನು ಬಳಸುತ್ತೇವೆ ಅಂತ ಹೇಳೋರೂ ಇದ್ದಾರೆ. ಹಲವು ಬಣ್ಣಗಳನ್ನು ಬಳಸುವುದು ತಪ್ಪಿಲ್ಲ ಆದರೆ ಅದರಲ್ಲಿ ಕೆಲವು ವಿಷಯಗಳನ್ನು ಗಮನಿಸದೇ ಹೋದರೆ ಲೇಖನ ಚೆನ್ನಾಗಿ ಕಾಣಿಸುವುದಕ್ಕಿಂತ ಹಾಳಾಗಿ ಕಾಣಿಸುವುದೇ ಹೆಚ್ಚು.

ಈಗ ಉದಾಹರಣೆಗೆ ಅಂತರ್ಜಾಲ ಪುಟದಲ್ಲಿ ನೀಲಿ ಬಣ್ಣದ Text ನೋಡಿದಾಗ ಮೊದಲಿಗೆ ನನ್ನ ಮನಸ್ಸಿಗೆ ಬರುವುದು 'ಅದು ಲಿಂಕ್ ಇರಬಹುದು ಕ್ಲಿಕ್ ಮಾಡುವಾ' ಎಂದು. ಆದರೆ ಕೆಲವು ಕಡೆ ನೀಲಿ ಬಣ್ಣದ ಲಿಂಕ್ ಗಳೂ ಇರುತ್ತವೆ, ಅದರ ಜೊತೆಗೆ ಲೇಖನದಲ್ಲಿ ಅದೇ ಬಣ್ಣದ Text ಗಳೂ ಇರುತ್ತವೆ, ಹಾಗಿದ್ದಾಗ ಗುರುತು ಹಿಡಿಯುವುದೇ ಕಷ್ಟ. ಇನ್ನಷ್ಟು ಉದಾಹರಣೆಗಳೆಂದರೆ ತಿಳಿ ಹಿನ್ನಲೆಯಲ್ಲಿ ತಿಳಿ ಬಣ್ಣದ ಅಕ್ಷರಗಳು, ಕಪ್ಪು ಹಿನ್ನಲೆಯ ಮೇಲೆ ಕಡು ನೀಲಿ ಬರಹಗಳು. ಹಾಗೆ ಬರೆದಿರುವುದನ್ನೆಲ್ಲಾ ಓದಲು ಹರಸಾಹಸ ಪಡಬೇಕಾಗುತ್ತದೆ.

ಉತ್ತಮ FONT ಆಯ್ಕೆ

ಕನ್ನಡದಲ್ಲಿ ಉತ್ತಮ ಫಾಂಟ್ ಗಳು ಬಹಳ ಕಡಿಮೆ ಇದೆ, ಹಾಗಾಗಿ ಈ ವಿಷಯದ ಬಗ್ಗೆ ಜಾಸ್ತಿ ಹೇಳಲು ಹೋಗುವುದಿಲ್ಲ. ಆದರೂ ತುಂಬಾ ಧೀರ್ಘವಾದ ಲೇಖನಗಳಿಗೆ ಕೈಬರಹ ಫಾಂಟ್ ಉಪಯೋಗಿಸಿದ್ದರೆ ಓದುವುದು ಬಹಳ ಕಷ್ಟ.

ನನ್ನ ಅಂತರ್ಜಾಲ ಪುಟಗಳನ್ನು ಮಾಡುವಾಗಿನ ಅನುಭವಗಳನ್ನು ಹಂಚಿಕೊಂಡಿದ್ದೇನೆ. ನೀವೂ ನಿಮ್ಮ ಅನುಭವಗಳನ್ನೂ ತಿಳಿಸಿ.

ಕಂಪ್ಯೂಟರ್ ನ ಕನ್ನಡ ಕಾಗಕ್ಕ ಗುಬ್ಬಕ್ಕ ಬರವಣಿಗೆಯಾಗದಿರಲಿ.

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in