ಬರ್ತಡೇ wish-u

ಎಂದಿನಂತೆ ಇವತ್ತು ಟಿವಿಯಲ್ಲಿ ಕಾರ್ಯಕ್ರಮ ನಡೆಸಿಕೊಡೋಕೆ ಯಾಕೋ ಮನಸ್ಸೇ ಇರಲಿಲ್ಲ, ಆದರೂ ಯಾಂತ್ರಿಕವಾಗೇ ಸ್ಟುಡಿಯೋಗೆ ಹೊರಟೆ. ಕಳೆದ ಸಲ ನನ್ನ ಹುಟ್ಟುಹಬ್ಬಕ್ಕೆ ಅವನು ನನ್ನ ಜೊತೆಲಿದ್ದ, ಇವತ್ತು ಅವನಿಲ್ಲದೆ ಒಂತರಾ ಬೇಜಾರಾಗ್ತಿತ್ತು. ಏನೋ ಸಣ್ಣ ಕಾರಣಕ್ಕೆ ನಾನೇ ಅವನ ಹತ್ರ ಜಗಳ ಆಡಿದ್ದೆ.

ಸ್ಟುಡಿಯೋಗೆ ಹೋದಾಗ, "ಇವತ್ತು ಈ ಐದು ಜನಕ್ಕೆ ಫೋನ್ ಮಾಡಿ ಹುಟ್ಟುಹಬ್ಬಕ್ಕೆ ವಿಷ್ ಮಾಡ್ಬೇಕಮ್ಮಾ" ಅಂದರು.

ಸರಿ ಅಂತ ಅಂದು ಅವರು ಕೊಟ್ಟಿದ್ದ ಎಲ್ಲಾ ಗ್ರೀಟಿಂಗ್ಸ್‍ನ ತಗೊಂಡು ಒಳಗೆ ಹೋದೆ. ಅದ್ರಲ್ಲಿ ಕೆಲವೊಂದು ಚೆನಾಗಿತ್ತು, ಅದ್ರಲ್ಲೂ ಒಂದು ತುಂಬಾ ಇಷ್ಟ ಆಗಿತ್ತು. ಆಮೇಲೆ ಕಾರ್ಯಕ್ರಮ ಮುಗಿದ್ಮೇಲೆ ನಾನೇ ಅದನ್ನ ತಗೊಂಡು ಹೋಗ್ಬೇಕು ಅಂತ ಅಂದ್ಕೊಂಡೆ.

ಕಾರ್ಯಕ್ರಮ ಶುರು ಮಾಡಿದೆ, ಒಂದೊಂದೇ ನಂಬರ್‍ಗೆ ಕಾಲ್ ಮಾಡಿ ಕೊಡ್ತಾ ಇದ್ರು ನಾನು ಮಾತಾಡಿ ವಿಷ್ ಮಾಡ್ತಾ ಇದ್ದೆ. ಆ ಐದು ಜನದಲ್ಲಿ ಒಬ್ಬರಿಗೆ ಕಾಲ್ ಮಾಡಿದ್ದು ರಿಂಗಾಯ್ತು ಆದ್ರೆ ರಿಸೀವ್ ಮಾಡ್ಲೇ ಇಲ್ಲ. ಅದರ ಬದಲಿಗೆ ಅವರಿಗೋಸ್ಕರ ಅಂತ ಒಂದೊಳ್ಳೆ ಹಾಡು ಹಾಕಿದ್ದಾಯ್ತು.

ಮದ್ಯಾನ ಮತ್ತೊಂದು ಪ್ರೋಗ್ರಾಮ್ ನಡೆಸಿಕೊಡೋಕೆ ಆಗಲ್ಲ ಅನ್ನಿಸ್ತು, ಹುಷಾರಿಲ್ಲ ಅಂತ ಅರ್ಧ ದಿನ ರಜೆ ಹಾಕಿ ಮನೆಗೆ ಹೊರಟೆ.

ಮನೆಗೆ ಬಂದು ಮೊಬೈಲ್ ತೆಗೆದಿಡುವಾಗ ಒಂದು ಮಿಸ್ ಕಾಲ್ ಅಂತ ತೋರಿಸ್ತು, ಅವನೇ ಇರಬಹುದಾ? ಅಂತ ಮನಸಲ್ಲಿ ಅಂದುಕೊಂಡೆ. ನಂಬರ್ ನೋಡಿದೆ, ಸ್ಟುಡಿಯೋದ ನಂಬರ್. ಸ್ಟುಡಿಯೋದಲ್ಲಿ ಯಾರಿಗೂ ನನ್ನ ಈ ನಂಬರ್ ಗೊತ್ತಿಲ್ವಲ್ಲ, ಹೆಂಗೆ ಸಿಕ್ಕಿತು ಅವ್ರಿಗೆ, ಏನಕ್ಕೆ ಫೋನ್ ಮಾಡಿರ್ಬೋದು ಅಂತ ಯೋಚನೆ ಮಾಡ್ತಾ ಇದ್ದೆ. ವಾಪಸ್ ಫೋನ್ ಮಾಡಿ ಕೇಳೋಣಾ ಅಂತ ಡಯಲ್ ಮಾಡಕ್ಕೆ ನೋಡುವಾಗ ಮಿಸ್ ಕಾಲ್‍ನ ಟೈಮ್ ಗಮನಿಸಿದೆ, ನಾನು ಪ್ರೋಗ್ರಾಮ್ ಕೊಡುತ್ತಿದ್ದಾಗ ಬಂದ ಕರೆ ಅದು.

ತಕ್ಷಣ ಸ್ಟುಡಿಯೋದಿಂದ ತಂದಿದ್ದ ಆ ಗ್ರೀಟಿಂಗ್ಸ್ ತೆಗೆದು ನೋಡಿದೆ, ಅದರಲ್ಲಿ ಯಾರಿಗೆ ಕಾಲ್ ಮಾಡ್ಬೇಕು ಅಂತ ಬರೆದಿದ್ದ ನಂಬರ್ ನೋಡಿದೆ. ನನ್ನ ನಂಬರ್ ಕನ್ನಡದಲ್ಲಿ ಬರೆದಿತ್ತು.

Comments !