ARAVINDA VISHWANATHAPURA

ಅಕ್ಕನ ಜೊತೆ ಜಗಳ

Feb 1, 2009
1 minute read.
ಗಿಡ ಜಗಳ ಪೆದ್ದುತನ ಮುಟ್ಟಾಳ ಹಾಸ್ಯ kannadablog

ಇದು ೬ ವರ್ಷಗಳ ಹಿಂದೆ ನಡೆದ ಘಟನೆ .

ಪಿಯುಸಿ ಓದುವಾಗ ಮನೆಯಲ್ಲೇ ಇದ್ದಿದುರಿಂದ ಮರಗಿಡಗಳ ಬಗ್ಗೆ ಬಹಳ ಆಸಕ್ತಿ ಇತ್ತು. ಸುಮಾರು ತರಹದ ಗಿಡಗಳನ್ನು ಬೆಳೆಸೋ ಹುಚ್ಚು. ವಿಜಯ ಕರ್ನಾಟಕ ದಲ್ಲಿ ಬುಧವಾರ ಬರುತ್ತಿದ್ದ ಕೃಷಿ ವಿಜಯ ಮತ್ತು ಅಡಿಕೆ ಪತ್ರಿಕೆ ಓದಿ ಅದರ ಬಗ್ಗೆ ಪ್ರಯೋಗ ಮಾಡುತ್ತಿದ್ದೆ. ಗಿಡಗಳನ್ನು ಕಸಿ ಮಾಡಕ್ಕೆ ಅಂತ ಸುಮಾರು ಹೂವಿನ ಗಿಡಗಳನ್ನು ಕಟ್ ಮಾಡಿ ಅಮ್ಮನ ಹತ್ತಿರ ಬೈಸಿಕೊಂಡಿದೀನಿ.(ಇಪ್ಪತ್ತರಲ್ಲಿ ಒಂದು success ಕೂಡಾ ಆಗ್ತಿತ್ತು ಗೊತ್ತಾ ! :)).

ಒಂದು ದಿನ ಅಮ್ಮ ನೆಟ್ಟಿದ್ದ ಯಾವ್ದೋ ತರಕಾರಿ ಗಿಡದ್ದು ಹೆಸ್ರು ಗೊತ್ತಿರ್ಲಿಲ್ಲ, ಅದಕ್ಕೆ ಅದನ್ನ ಕಿತ್ತುಕೊಂಡು ಹೋಗಿ ಇದ್ರು ಹೆಸ್ರು ಏನಮ್ಮಾ ಅಂತ ಕೇಳಿದ್ದಕ್ಕೆ, ಹೆಸ್ರು ಕೇಳಕ್ಕೆ ಯಾರದ್ರು ಗಿಡ ಕೀಳ್ತಾರ? ಆ ಗಿಡ ಇನ್ನು ಬದುಕುತ್ತಾ? ಅಂತೆಲ್ಲಾ ಬೈಸಿಕೊಂಡಿದ್ದಾಯ್ತು .

ನನ್ನ ಈ ತರಹದ ತಂಟೆ ತಾಳಲಾರದೆ ನನ್ನ ಅಕ್ಕ ಅಂತೂ "ಹೂವಿನ ಗಿಡಗಳನ್ನು ಮುಟ್ಟಿದ್ರೆ ನೋಡು" ಅಂತ ವಾರ್ನಿಂಗ್ ಕೊಟ್ಟಿದ್ದಳು, ನಾನು ಅದಕ್ಕೆ ನಾನೇ ಬೇರೆ ನೆಟ್ಟುಕೊಳ್ತೀನಿ ಅಂತ ಒಂದಷ್ಟು ಗಿಡಗಳನ್ನು ನೆಟ್ಟುಕೊಂಡಿದ್ದೆ. ಒಂದಿನ ಮಟಮಟ ಮದ್ಯಾನ್ನ ಆ ಗಿಡಗಳಿಗೆ ನೀರು ಹಾಕ್ತಾ ಇದ್ದೆ. ಅಕ್ಕ ಹೇಳಿದ್ಲು ಬಿಸಿಲಲ್ಲಿ ನೀರು ಹಾಕಿದ್ರೆ ಗಿಡಗಳಿಗೆ ಒಳ್ಳೇದಲ್ಲ ಅಂತ, ಆದ್ರೆ ನಾನು ಅಕ್ಕ ಹೇಳಿದ್ದೆಲ್ಲಾ ಕೇಳ್ಬಾರ್ದು ಅಂತ ನೀರು ಹಾಕ್ತನೇ ಇದ್ದೆ. ಆದರೆ ಅವಳು ಬಿಡಬೇಕಲ್ಲ, ಅಷ್ಟರಲ್ಲಾಗಲೇ ಅಮ್ಮನ ಹತ್ತಿರ ಹೇಳಿಯಾಗಿತ್ತು, ಅಮ್ಮ ನನ್ನನ್ನು ಕರೆದೂ ಆಯ್ತು…​ ನಾನು ಅಕ್ಕನ ಮೇಲೆ ಕೋಪಿಸಿಕೊಂಡು, ಏನೂ ಗೊತ್ತಿಲ್ಲದೇ ಇರೋ ತರ "ಏ..ನಮ್ಮ ಕರೆದಿದ್ದು ?" ಅಂತ ಕೇಳಿಕೊಂಡು ಹೋದೆ. ಅಮ್ಮನೂ ಅಕ್ಕನ ಕಡೆನೇ ಇದ್ದಿದ್ರಿಂದ (ಅಥವಾ ಗಿಡಗಳ ಪರವಾಗಿ ಇದ್ದಳೋ…​), ನಂಗೆ ಸಿಟ್ಟು ಬಂದು "ನಾ ನೆಟ್ಟ ಗಿಡಕ್ಕೂ ನೀರು ಹಾಕಕ್ಕೂ ಬಿಡಲ್ಲ., ನಾ ನೆಟ್ಟಿದ್ದ ಕಬ್ಬು ಅಕ್ಕಂಗೆ ಕೊಡಲ್ಲ" ಅಂತ ಅವತ್ತು ಸಂಜೆವರ್ಗೂ ಅಕ್ಕನ ಜೊತೆ ಮಾತು ಬಿಟ್ಟಿದ್ದೆ.

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in