ಅಡಿಗಾಸ್ ಹೋಟೆಲ್ ಮತ್ತು ಕಥೆ

ನನ್ನ ಮನಸಲ್ಲಿ ಅವಾಗವಾಗ ಏನಾದ್ರು ಕತೆ ಬರೆಯೋಕೆ ಐಡಿಯಾ ಬರ್ತಾ ಇರುತ್ತೆ, ಆ ಐಡಿಯಾನ ಕತೆ ಮಾಡೋಕಂತ ಮನಸಲ್ಲೇ ಎಳೆಯೋಕೆ ಶುರು ಮಾಡ್ತೀನಿ. ಕತೆ ಹುಟ್ಟೋಕೆ ಇಂತದ್ದೇ ಜಾಗಕ್ಕೆ ಹೋಗ್ಬೇಕಂತಿಲ್ಲ, ಆದ್ರೂ ಕೆಲವು ಸಲ ಒಂದು ಕಾಫಿ ಕುಡೀತಾ ಯೋಚಿಸೋಣ ಅಂತ ಅಡಿಗಾಸ್ ಹೋಟೆಲ್ ಗೆ ಹೋಗ್ತಾ ಇರ್ತೀನಿ. ಅಲ್ಲಿ ಕೆಲವೊಂದು ಸಲ ನನ್ನ ಯೋಚನಾ ಲಹರಿ ಎಲ್ಲೆಲ್ಲೋ ಹೋಗಿ ಒಬ್ಬೊಬ್ನೆ ನಗ್ತಾ ಇರ್ತೀನಿ. ಅದು ಪ್ರಾಬ್ಲಮ್ಮು ಅಂತ ಅನ್ನಿಸಿರ್ಲಿಲ್ಲ, ಆದ್ರೆ ಮೊನ್ನೆ ಒಂದಿನ ಹಂಗೇ ಯೋಚ್ನೆ ಮಾಡ್ತಾ ನನ್ನ ಐಡಿಯಾಗೆ ನಾನೇ ನಗ್ತಿದ್ದೆ. ಎಡಗಡೆ ತಿರುಗಿ ಯೋಚ್ನೆ ಮಾಡ್ತಾ ಇದ್ದೋನು ಹಾಗೇ ನಗ್ತಾ ನಗ್ತಾ ಬಲಗಡೆ ತಿರುಗಿದೆ. ಅದೇ ಸಮಯಕ್ಕೆ ಎದುರುಗಡೆ ಟೇಬಲ್ ಅಲ್ಲಿ ಒಬ್ಬಳು ಹುಡುಗಿ ಫೋನಲ್ಲಿ ಮಾತಾಡ್ತಾ ನಗುತ್ತಿದ್ದಳು, ಅವಳೂ ನಗ್ತಾ ನಗ್ತಾ ನನ್ನ ಕಡೆಗೇ ತಿರುಗಿದ್ದಳು. ಬೇರೆ ಯಾರಾದ್ರೂ ನಮ್ಮಿಬ್ಬರನ್ನ ನೋಡಿದ್ರೆ ಯಾರೋ ಪರಿಚಯದವ್ರು ನಗಾಡ್ಕೊಳ್ತಿದಾರೆ ಅಂತ ಅಂದ್ಕೋಬೇಕು ಅಷ್ಟು ಸಹಜವಾಗಿತ್ತು. ನನಗೆ ತಕ್ಷಣಕ್ಕೆ ನಗು ನಿಲ್ಲಿಸೋಕೆ ಆಗ್ಲಿಲ್ಲ, ಅದ್ರಲ್ಲೂ ಆ ಹುಡುಗಿ ಕೂಡ ನನ್ನ ಕಡೆಗೇ ನೋಡ್ತಾ ನಕ್ಕಿದ್ರಿಂದ ನಾನೂ ಒಳೊಗೊಳಗೆ ಖುಷಿಯಾಗಿದ್ದೆ :) ಆದ್ರೆ ಆ ಹುಡುಗಿಗೆ ಸಲ್ಪ ನಾಚಿಕೆ ಆಯ್ತು, ಮತ್ತೆ ಬೇರೆಕಡೆ ತಿರುಗಿ ಸಲ್ಪ ಸೀರಿಯಸ್ಸಾಗಿ ಫೋನಲ್ಲಿ ಮಾತು ಮುಂದುವರೆಸಿದಳು. ನಾನೂ ಮತ್ತೆ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೆ ಉಳಿದ ಕಾಫಿಯನ್ನು ಒಂದೇ ಗುಟುಕಲ್ಲಿ ಕುಡಿದು ಅಲ್ಲಿಂದ ಹೊರಗೆ ಬಂದಿದ್ದೆ.

ಇನ್ನೊಂದ್ಸಲ ಅಲ್ಲೇ ರವಾ ದೋಸೆ ತಿನ್ನುತ್ತಾ ನಿಂತಿದ್ದೆ, ಅಷ್ಟರಲ್ಲಿ ಒಬ್ಬಳು ಹುಡುಗಿ "ಪ್ರತೀ" ಅಂತ ಗೆಳತಿಯನ್ನು ಕರೆದಳು. ಕರೆದದ್ದು ಸಲ್ಪ ಜೋರಾಗೇ ಇತ್ತು, ಅದೂ ಅಲ್ಲದೆ "ಪ್ರತೀ" ಅನ್ನೋ ಹೆಸರೇ ಸಲ್ಪ different ಆಗಿದ್ರಿಂದ ಯಾರಿರ್ಬೋದು ನೋಡಣ ಅಂತ ಹಿಂದೆ ತಿರುಗಿದೆ. ಪೂರ್ತಿ ಹೆಸ್ರು ಏನಿರ್ಬೋದೂ ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ ಆ ಹುಡುಗಿ ಕೇಳಿದಳು "ನಿಂಗೆ ಮೇಲ್ ಸಾಂಬಾರ್ ಬೇಕಾ?" ಅಂತ. ಹೀ ಹೀ ಏನಪ್ಪಾ ಇದು "ಮೇಲ್ ಸಾಂಬಾರ್" ಅಂತ "ಪ್ರತೀ" ಮುಖ ನೋಡ್ತಾ ಇದ್ದೆ. ಅವಳ ಪ್ರಶ್ನೆಗೆ "ಪ್ರತೀ" ಕೂಡ confuse ಆದಂಗೆ ಇತ್ತು. "ಪ್ರತೀ" ಮುಖದಲ್ಲಿ ಪ್ರಶ್ನೆ ನೋಡಿ ಮತ್ತೆ ಹೇಳಿದಳು, "ಇಡ್ಲಿ ಜೊತೆ ಸಾಂಬಾರ್ seperate ಬೇಕಾ ಅಥವಾ ಮೇಲ್ಗಡೆನೇ ಹಾಕ್ಸೋದಾ?" ಅಂತ. ನಂಗೆ ನಗು ತಡ್ಯಕ್ಕೆ ಆಗ್ಲಿಲ್ಲ, ಹಂಗೇ ಮೊಬೈಲ್ ತೆಗೆದು ಅದ್ರಲ್ಲಿ ಮೆಸೇಜ್ ಓದಿ ನಗ್ತಿರೋ ತರಹ ನಟನೆ ಮಾಡಿದೆ.

Comments !